07/12/2025
1008 ರೈತ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯು, ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠದ ಸಹಾಯದಿಂದ ನಡೆಸಿದ ಈ ಕಾರ್ಯಕ್ರಮವು ಧಾರ್ಮಿಕತೆ ಮತ್ತು ಸಂಸ್ಕೃತಿಯ ಸಮನ್ವಯದ ಮಾದರಿಯಾಯಿತು.
ವಿಡಿಯೋ ಮಾಧ್ಯಮದ ಮೂಲಕ ಆಶೀರ್ವಚನ ನೀಡಿದ ಶ್ರೀ ಶ್ರೀ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮಿಗಳು
“ರೈತರ ಸಾಮೂಹಿಕ ಕಲ್ಯಾಣಕ್ಕಾಗಿ ಇಂತಹ ಅಪೂರ್ವ ಕಾರ್ಯಕ್ರಮ ನಡೆದಿರುವುದು ಬಹಳ ಸಂತೋಷದ ವಿಷಯ. ಕಷ್ಟದಲ್ಲಿದ್ದ ಅನೇಕ ರೈತರ ವಿವಾಹವು ಶ್ರದ್ಧೆಯಿಂದ ನೆರವೇರಿದೆ. ವಿವಾಹವು ನಮ್ಮ ಧರ್ಮಪರಂಪರೆಯಲ್ಲಿ ಅತ್ಯಂತ ಮಹತ್ವದ ಸಂಸ್ಕಾರ. ಮಾನವನ ಬುದ್ಧಿಯೇ ಅವನ ಮಹಾ ಶಕ್ತಿ, ಅದನ್ನು ಧಾರ್ಮಿಕ ಆಚರಣೆಯಲ್ಲಿ ಬಳಸಿದಾಗಲೇ ಶ್ರೇಯಸ್ಸು ದೊರಕುತ್ತದೆ. ದಂಪತಿಗಳು ಕಷ್ಟ-ಸುಖಗಳನ್ನು ಹಂಚಿಕೊಂಡು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಹೊಸ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ ಎಲ್ಲಾ ಜೋಡಿಗಳಿಗೆ, ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಹಾಗೂ ಶ್ರೀ ಶಾರದಾಂಬೆಯ ಪರಿಪೂರ್ಣ ಅನುಗ್ರಹ ಇರಲಿ'' ಎಂದು ಅನುಗ್ರಹಿಸಿದರು.
ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಅಧ್ಯಕ್ಷರಾದ ಚಂದ್ರಶೇಖರ್ ರವರು - ಉಭಯ ಜಗದ್ಗುರುಗಳ, ಶಾರದಾಂಬೆಯ ಆಶೀರ್ವಾದವನ್ನು ಪ್ರಸಾದದ ಮೂಲಕ ನಮಗೆ ತಲುಪಿಸಿದ ವೇದಬ್ರಹ್ಮ ಶ್ರೀ ಕೃಷ್ಣಭಟ್ಟರು ಹಾಗೂ ವೇದಬ್ರಹ್ಮ ಶ್ರೀ ಶಮಂತ ಭಟ್ಟರಿಗೆ ಧನ್ಯವಾದಗಳು ಸಲ್ಲಿಸುತ್ತಾ
“ಇಂದೊಂದು ಅಭೂತಪೂರ್ವವಾದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕಾಗಿ ಆರಂಭದ ಹಂತದಿಂದ ಅಂತಿಮ ಕ್ಷಣವರೆಗೂ ಸಂಪೂರ್ಣ ಬೆಂಬಲ ನೀಡಿ - ವಿಶಾಲ ಪಂಡಲ್, ವೈದಿಕ ವಿಧಿವಿಧಾನಗಳು, ಹೊಸ ಬಟ್ಟೆಗಳು, ಅಗತ್ಯವಾದ ಪಾತ್ರೆಗಳ ಸಂಪೂರ್ಣ ಸೆಟ್, ರಾಜ್ಯದ ನಾನಾ ಮೂಲೆಗಳಿಂದ ಆಗಮಿಸುವ ರೈತರ ಪ್ರಯಾಣ ವೆಚ್ಚವನ್ನೂ ಸೇರಿದಂತೆ ಅನೇಕ ವ್ಯವಸ್ಥೆಗಳ ವೆಚ್ಚವನ್ನು ಭರಿಸಿದ ಶಾರದಾಪೀಠಕ್ಕೆ ಅನಂತ ಧನ್ಯವಾದಗಳು.”ಎಂದು ಕೃತಜ್ಞತೆ ಸಲ್ಲಿಸಿದರು.