Nisarga Conservation Trust

Nisarga Conservation Trust wildlife and Nature conservation

ದಿನಾಂಕ :10/08/2026 ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಧನೋರತಾಲ್ಲೂಕಿನ ಜಪ್ತಲೈ ಗ್ರಾಮದ ವಸತಿ ನಿಲಯದಲ್ಲಿ ಹಾವು ಕಡಿದು ಮೂವರುವಿದ್ಯಾರ್ಥಿಗಳ...
30/08/2026

ದಿನಾಂಕ :10/08/2026 ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಧನೋರ
ತಾಲ್ಲೂಕಿನ ಜಪ್ತಲೈ ಗ್ರಾಮದ ವಸತಿ ನಿಲಯದಲ್ಲಿ ಹಾವು ಕಡಿದು ಮೂವರು
ವಿದ್ಯಾರ್ಥಿಗಳು ಸಾವನ್ನಪ್ಪಿ, ಮೂವರು ಅಸ್ವಸ್ಥರಾದ ಪ್ರಕರಣಕ್ಕೆ ಕಾರಣವಾಗಿದ್ದು, ಕಟ್ಟಾವು ಅಥವಾ
Common Krait ಹಾವಿನ ಕಡಿತ ಎಂದು ತಿಳಿದು ಬಂದಿದೆ.

ಕಟ್ಟಾವು ಭಾರತದ ಅತೀ ವಿಷಕಾರಿ ಹಾವುಗಳಲ್ಲಿ ಒಂದು,ಇದು ನಾಗರಹಾವು,ಕೊಳಕು ಮಂಡಲ,ಗರಗಸ ಹುರುಪೆ ಮಂಡಲ ಹಾವುಗಳಿಂತಲೂ ವಿಷಕಾರಿಯಾಗಿದೆ, ಈ ಹಾವು ರಾತ್ರಿ ಸಂಚಾರಿಯಾದ
ಕಾರಣದಿಂದ ಜನ ಸಾಮಾನ್ಯರು ಇದನ್ನು ನೋಡಿರುವುದು ಕಡಿಮೆ. ನಮ್ಮ ಮಲೆನಾಡು ಭಾಗದಲ್ಲೂ ಈ ಜಾತಿಯ ಹಾವುಗಳು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತವೆ.

#ಆರು ಜನರ ಮೇಲೆ ದಾಳಿ ಏಕೆ ?

ಕಟ್ಟಾವುಗಳು ಇತರ ಜಾತಿ ಹಾವುಗಳನ್ನು ತಿನ್ನುತ್ತವೆ(Swallow) ಜೊತೆಗೆ ಇಲಿಗಳಂತಹ
ಸಸ್ತನಿಗಳನ್ನು ಬೇಟೆಯಾಡುತ್ತವೆ, ರಾತ್ರಿಯ ವೇಳೆ ಮನೆಯೊಳಗೆ ಬರುವ ಇವು,ಕೆಲವರು
ಮಲಗಿರುವಾಗ ಕೈ ಕಾಲು ಅಥವಾ ಬೆರಳುಗಳನ್ನು ತಮಗರಿವಿಲ್ಲದಂತೆ ಅಲ್ಲಾಡಿಸುತ್ತಾರೆ,
ಆಗ ತನ್ನ ಬೇಟೆಯೆಂದು, ಬೆರಳುಗಳು ಅಥವಾ ಕೈ ಕಾಲಿಗೆ ಕಡಿವ ಸಾಧ್ಯತೆ ಇದೆ.
ಹಾಸಿಗೆಗಳಲ್ಲಿ ಇಲಿಗಳ ವಾಸನೆಯಿದ್ದರೂ ಅವುಗಳನ್ನು ಹುಡುಕಲು ಹಾಸಿಗೆಯೊಳಗೆ ಸೇರಿಕೊಳ್ಳುವ ಸಾಧ್ಯತೆ ಇದೆ.

ಕೆಲವು ಸಾರಿ ಮನುಷ್ಯನ
ದೇಹದ ಉಷ್ಣತೆ ಪಡೆಯಲು ಹಾಸಿಗೆಯೊಳಗೆ ಸೇರಿಕೊಳ್ಳುತ್ತವೆ. ಮಲಗಿರುವ ವ್ಯಕ್ತಿ ಹಾವಿನ
ಮೇಲೆ ಹೊರಳಿದಾಗ ಗಾಬರಿಗೊಂಡು ರಕ್ಷಣಾತ್ಮಕವಾಗಿ ಕಡಿಯುತ್ತದೆ. ಒಮ್ಮೆ ಹಾವು
ಗಾಬರಿಗೊಂಡರೆ ವ್ಯಕ್ತಿಯ ಪ್ರತಿ ಹೊರಳುವಿಕೆಯು ತನಗೆ ಅಪಾಯವೆಂದು ಪರಿಗಣಿಸಿ
ನಿರಂತರವಾಗಿ ಕಡಿಯುವ ಸಾಧ್ಯತೆ ಇರುತ್ತದೆ, ಮೇಲಿನ ಘಟನೆಯಲ್ಲಿ ವಸತಿ ನಿಲಯದ
ವಿದ್ಯಾರ್ಥಿಗಳು ಒಟ್ಟಿಗೆ ನೆಲದ ಮೇಲೆ ಮಲಗಿರುವ ಸಾಧ್ಯತೆ ಇದೆ.

#ಸೈಲೆಂಟ್ ಕಿಲ್ಲರ್ !

ಕಟ್ಟಾವುಗಳ ವಿಷದ ಹಲ್ಲುಗಳು ತುಂಬಾ ಚಿಕ್ಕದ್ದಿದ್ದು ಕಡಿದಾಗ ಸೊಳ್ಳೆ ಕಚ್ಚಿದ ಅಥವಾ
ಸಣ್ಣದಾಗಿ ಚುಚ್ಚಿದ ಅನುಭವ ನೀಡಬಹುದು,ಇದರ ವಿಷವು ತಕ್ಷಣಕ್ಕೆ ಉರಿ ನೋವು
ಸೆಳೆತ ಅಥವಾ ತೀಕ್ಷ್ಣಸಂವೇದನೆಯನ್ನು ಉಂಟುಮಾಡದೇ ಇರುವುದರಿಂದ ನಿದ್ರೆಯಲ್ಲಿ ಕಡಿದಾಗ
ಎಚ್ಚರಗೊಳ್ಳುವ ಸಾಧ್ಯತೆ ತೀರಾ ಕಡಿಮೆ. ಮಕ್ಕಳೆ ಹೆಚ್ಚಾಗಿ ಇವುಗಳ ಕಡಿತಕ್ಕೆ ಬಲಿಯಾಗುತ್ತಾರೆ.
ಈ ಹಾವು ತೀಕ್ಷ್ಣವಾದ ವಿಷವನ್ನು
ಹೊಂದಿರುವುದರಿಂದ, ಸ್ವಲ್ಪ ವಿಷ ದೇಹ ಸೇರಿದರೂ ಮಾರಣಾಂತಿಕವಾಗಬಲ್ಲದು.
ನರ ಮಂಡಲವನ್ನು ನಿಷ್ಕ್ರಿಯಗೊಳಿಸಬಲ್ಲ ನ್ಯೂರೋಟಾಕ್ಸಿನ್ ವಿಷವನ್ನು ಹೊಂದಿದೆ, ಕಡಿತಕ್ಕೊಳಗಾಗಿ ತುಂಬಾ ಹೊತ್ತಿನ ನಂತರ ಹೊಟ್ಟೆನೋವು ವಾಂತಿಗಳಂತಹ ಲಕ್ಷಣಗಳು ಕಂಡು ಬರಬಹುದು.

ರಾತ್ರಿ ಸಂಚಾರಕ್ಕೆ ಟಾರ್ಚ್ ಬಳಸಿ, ಮನೆಯಿಂದ ಹೊರಗಡೆ ಮಲಗಿದಾಗ ಹಾವುಗಳು ಒಳ ನುಗ್ಗದಂತೆ ಹಾಸಿಗೆ ಸುತ್ತಲೂ ಸೊಳ್ಳೆ ಪರದೆ ಬಳಸಿ, ರಾತ್ರಿ
ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿ ಗುಡಿಸಲು ಮನೆಗಳಲ್ಲಿ ವಾಸಿಸುತ್ತಿದ್ದರೆ ಮಕ್ಕಳನ್ನು ಮಂಚಗಳ ಮೇಲೆ ಮಲಗಿಸಿ.

Nagaraj Bellur
Nisarga Conservation Trust

 #ಹಾವು ಕಡಿದಾಗ ಕರೆ ಮಾಡಿದರೆ 108 ಆಂಬುಲೆನ್ಸ್ ವಾಹನ ನಿಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುತ್ತದೆ,ಮನೆಗೆ ಬಂದು ಇಂಜೆಕ್ಷನ್ ನೀಡುವುದಿಲ್ಲ !ಯಾರಿ...
22/07/2026

#ಹಾವು ಕಡಿದಾಗ ಕರೆ ಮಾಡಿದರೆ 108 ಆಂಬುಲೆನ್ಸ್ ವಾಹನ ನಿಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುತ್ತದೆ,ಮನೆಗೆ ಬಂದು ಇಂಜೆಕ್ಷನ್ ನೀಡುವುದಿಲ್ಲ !

ಯಾರಿಗಾದರೂ ಹಾವು ಕಡಿದರೆ 108 ಆಂಬುಲೆನ್ಸ್ ಗೆ ಕರೆ ಮಾಡಿ, ಅವರು ನಿಮ್ಮ ಮನೆಗೆ ಬಂದು ಇಂಜೆಕ್ಷನ್ ( anti snake venom) ನೀಡುತ್ತಾರೆ,ನೀವು ಅಪಾಯದಿಂದ ಪಾರಾಗುತ್ತೀರಿ, ಈ ಮಾಹಿತಿಯನ್ನು ಎಲ್ಲಾ ಗುಂಪುಗಳಲ್ಲಿ ಹಂಚಿಕೊಳ್ಳಿ ಎನ್ನುವ ಸುದ್ಧಿಯೊಂದು ಇತ್ತೀಚಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಈ ಸುದ್ದಿಯು ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರಿಗೆ ನೀಡುತ್ತಿದೆ.

ಹಾವಿನ ಕಡಿತ ಮಾತ್ರವಲ್ಲ ಯಾವುದೇ ತುರ್ತು ಪರಿಸ್ಥಿತಿಯಲ್ಲಿ 108 ಆಂಬುಲೆನ್ಸ್ ಗೆ ಕರೆ ಮಾಡಿದರೆ ಸಹಾಯಕ್ಕೆ ಬರುವ ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ.

ಹಾವಿನ ಕಡಿತದ ಔಷಧಿಯನ್ನು ಪರಿಣಿತ ವೈದ್ಯರ ಮೂಲಕ ಆಸ್ಪತ್ರೆಗಳಲ್ಲಿ ಪಡೆಯಬೇಕು.

#ಹಾವಿನ ಕಡಿತಕ್ಕೆ ಮನೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ

ನಮ್ಮ ದೇಶದಲ್ಲಿ ಪ್ರತಿವರ್ಷ 5 ಲಕ್ಷಕ್ಕೂ ಅಧಿಕ ಹಾವಿನ ಕಡಿತದ ಪ್ರಕರಣಗಳು ವರದಿಯಾಗುತ್ತವೆ, ಅವುಗಳಲ್ಲಿ ವಿಷರಹಿತ, ವಿಷಪೂರಿತ ಹಾವುಗಳ ಕಡಿತಗಳು ಸೇರಿವೆ. ವೈದ್ಯರು ರೋಗಿಯನ್ನು ಪರೀಕ್ಷೆ ಮಾಡಿ ಹಾವಿನ ಕಡಿತದ ಔಷಧಿ (ASV : Antisnake venom) ಕೊಡುವ ಬಗ್ಗೆ ನಿರ್ಧರಿಸುತ್ತಾರೆ. ಕೆಲವು ಸಲ ವಿಷಪೂರಿತ ಹಾವುಗಳು ಕಡಿದಾಗ ವಿಷವನ್ನು ಬಿಡದೇ ಇರಬಹುದು (Dry bite)ಅಂತಹ ಸಂದರ್ಭದಲ್ಲಿ ರೋಗಿಗೆ ವೈದ್ಯರು ASV ನೀಡದೆ Observation ಗೆ ಒಳಪಡಿಸಿ ಶರೀರದಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತಾರೆ, ಇದಕ್ಕೆ ಗಂಟೆಗಳ ಸಮಯ ಬೇಕಾಗುತ್ತದೆ.
ಕಡಿದ ಹಾವು ವಿಷಕಾರಿ ಅಥವಾ ವಿಷರಹಿತ ಗುರುತಿಸಬೇಕು,ಇದಕ್ಕೆ ರಕ್ತದ ಮಾದರಿಯನ್ನು BTCT ಪರೀಕ್ಷೆಗೆ ಒಳಪಡಿಸಬೇಕು, ಇದನ್ನು ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಮಾಡಬೇಕು.

#ಕೆಲವರಿಗೆ ತೀವ್ರ ಸ್ವರೂಪದ ಅಲರ್ಜಿಗೆ ಕಾರಣವಾಗಬಹುದು

ಹಾವಿನ ಕಡಿತಕ್ಕೆ ಕೊಡುವ ಔಷಧವನ್ನು ಕುದುರೆಯ ರಕ್ತದ ಸೀರಮ್ ನಿಂದ ಪಡೆಯಲಾಗುತ್ತದೆ, ಹಾಗಾಗಿ ಇದನ್ನು ವಿದೇಶಿ ಪ್ರೋಟಿನ್(foreign protein) ಎನ್ನುತ್ತಾರೆ. ಇದು ಬೇರೆ ಪ್ರಾಣಿಯಿಂದ ಉತ್ಪತ್ತಿಯಾದ ಪ್ರತಿಕಾಯಗಳನ್ನು ಒಳಗೊಂಡಿರುತ್ತದೆ, ಇದು ಮನುಷ್ಯನ ರಕ್ತ ಪ್ರವಾಹಕ್ಕೆ ಪ್ರವೇಶಿಸಿದಾಗ ಮಾನವನ ರೋಗ ನಿರೋಧಕ ವ್ಯವಸ್ಥೆಯು ಅವುಗಳನ್ನು ಹಾನಿ ಮಾಡುವ ಆಕ್ರಮಣಕಾರರೆಂದು ಭಾವಿಸಿ ವಿದೇಶಿ ಪ್ರೋಟೀನ್ಗಳ ವಿರುದ್ಧ ಹೋರಾಡಲು Histamine ಗಳನ್ನು ( ದೇಹದ ರೋಗ ನಿರೋಧಕ ಪ್ರಕ್ರಿಯೆಗಳನ್ನು ತಕ್ಷಣವೆ ಚಾಲನೆಗೊಳಿಸುವ ರಾಸಾಯನಿಕ ಸಂದೇಶವಾಹಕ) ಬಿಡುಗಡೆ ಮಾಡುವುದರಿಂದ ಅನಾಫಿಲ್ಯಾಕ್ಸಿಸ್ ನಂತಹ ಗಂಭೀರ ಅಲರ್ಜಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಇದರಿಂದ ಉಸಿರಾಟದ ತೊಂದರೆಗಳು ಪ್ರಜ್ಞೆ ತಪ್ಪುವುದು, ಚರ್ಮದ ದದ್ದುಗಳು ತುರಿಕೆ ತುಟಿ ನಾಲಿಗೆಯ ಊತ ಕೆಮ್ಮು ಉಬ್ಬಸ ರಕ್ತದೊತ್ತಡದಲ್ಲಿ ಕುಸಿತ ಕಾಣಿಸಿಕೊಳ್ಳಬಹುದು. ಇದಕ್ಕೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯ ವಿರುತ್ತದೆ. ಕೆಲವರಿಗೆ ವೆಂಟಿಲೇಟರ್ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ.
ನಮ್ಮ ದೇಶದಲ್ಲಿ ನಾಲ್ಕು ವಿಷಕಾರಿ ಹಾವುಗಳ ಚಿಕಿತ್ಸೆಗೆ ಒಂದೇ ರೀತಿಯ Polyvalent Antivenom Serum ಬಳಸುತ್ತಾರೆ, ಇದು Monovalent Antivenom sirum ಗಿಂತ ಹೆಚ್ಚಿನ ಅಲರ್ಜಿಯನ್ನು ಉಂಟು ಮಾಡಬಲ್ಲದು.

ಹಾವಿನ ಕಡಿತಕ್ಕೆ ಒಳಗಾದ ಗ್ರಾಮೀಣ ಪ್ರದೇಶಗಳ ಜನರು ದೂರದ ಜಿಲ್ಲಾಸ್ಪತ್ರೆಗೆ ತಲುಪಲು ಸಾಕಷ್ಟು ಸಮಯ ಬೇಕು, ಇದರಿಂದ ಸಾವುಗಳ ಸಂಖ್ಯೆ ಹೆಚ್ಚಾಗಲು ಇದೂ ಒಂದು ಕಾರಣವಾಗಿರುವುದರಿಂದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾವಿನ ಕಡಿತಕ್ಕೆ ಕಡ್ಡಾಯವಾಗಿ ಚಿಕಿತ್ಸೆ ನೀಡಬೇಕು ಎನ್ನುವ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ ಹಾಗಾಗಿ ಹಾವು ಕಡಿದಾಗ ಯಾವುದೇ ವಾಹನದಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವಿನ ಕಡಿತಕ್ಕೆ ಉಚಿತವಾದ ಚಿಕಿತ್ಸೆ ಲಭ್ಯವಿದೆ.

ಸಾರ್ವಜನಿಕರು ಜಾಲತಾಣಗಳಲ್ಲಿ ಪ್ರಚಾರವಾಗಿರುವ ತಪ್ಪು ಮಾಹಿತಿಗಳ ಬಗ್ಗೆ ಗಮನ ನೀಡಬಾರದು.

ನಾಗರಾಜ್ ಬೆಳ್ಳೂರು
Nisarga Conservation Trust



ಪ್ಲಾಟಿಪಸ್: ಮೊಟ್ಟೆ ಇಡುವ ಅರೆಸ್ತನಿ ಹಾಲುಣಿಸುವ ವಿಚಿತ್ರ ಪಕ್ಷಿಈ ಪ್ರಾಣಿಯನ್ನು ಮೊದಲ ಬಾರಿ ನೋಡಿದವರು ಸ್ವಲ್ಪ ಗೊಂದಲಕ್ಕೊಳಗಾಗುವುದು ಸಹಜ. ಇ...
28/06/2026

ಪ್ಲಾಟಿಪಸ್: ಮೊಟ್ಟೆ ಇಡುವ ಅರೆಸ್ತನಿ ಹಾಲುಣಿಸುವ ವಿಚಿತ್ರ ಪಕ್ಷಿ

ಈ ಪ್ರಾಣಿಯನ್ನು ಮೊದಲ ಬಾರಿ ನೋಡಿದವರು ಸ್ವಲ್ಪ ಗೊಂದಲಕ್ಕೊಳಗಾಗುವುದು ಸಹಜ. ಇದರ ಮುಖದಲ್ಲಿ ಬಾತುಕೋಳಿಯ ಕೊಕ್ಕಿನಂತೆ ಅಗಲವಾದ ರಚನೆ ಇದೆ. ಅದರ ಬಾಲ ಬೀವರ್‌ನ ಬಾಲದಂತೆ ಚಪ್ಪಟೆಯಾಗಿರುತ್ತದೆ. ಕಾಲುಗಳಲ್ಲಿ ಜಾಲರಿಯಂತಿರುವ ಚರ್ಮವಿದೆ. ಅದು ನೀರಿನಲ್ಲಿ ಈಜುತ್ತದೆ, ನದಿಯ ತಳದಲ್ಲಿ ಆಹಾರ ಹುಡುಕುತ್ತದೆ, ಮೊಟ್ಟೆ ಇಡುತ್ತದೆ, ಆದರೆ ಮರಿಗಳಿಗೆ ಹಾಲುಣಿಸುತ್ತದೆ. ಹಾಗಿದ್ದರೆ ಇದು ಹಕ್ಕಿಯೇ? ಸ್ತನಿಯೇ? ಅಥವಾ ಎರಡೂ ಅಲ್ಲದ ವಿಚಿತ್ರ ಜೀವಿಯೇ? ಇಂತಹ ಲಕ್ಷಣಗಳನ್ನೆಲ್ಲಾ ಒಟ್ಟಿಗೆ ಹೊಂದಿರುವ ಜೀವಿ ಸಾಮಾನ್ಯವಾಗಿ ನಮ್ಮ ಕಲ್ಪನೆಗೆ ಬರುವುದಿಲ್ಲ. ಆದರೆ ಪ್ರಕೃತಿಯಲ್ಲಿ ಅದು ನಿಜವಾಗಿಯೇ ಇದೆ. ಅದೇ-ಪ್ಲಾಟಿಪಸ್.

ವಿಕಾಸದ ದೀರ್ಘ ಹಾದಿ

ಅದನ್ನು ನೋಡಿದಾಗ ನಾವು ಒಂದು ಮುಖ್ಯ ವಿಷಯವನ್ನು ಅರಿಯುತ್ತೇವೆ. ಜೀವಿಗಳು ಯಾವಾಗಲೂ ನಮ್ಮ ಪಾಠ ಪುಸ್ತಕದ ಸರಳ ವರ್ಗೀಕರಣಗಳಂತೆ ಕಾಣುವುದಿಲ್ಲ. ಕೆಲವೊಮ್ಮೆ ಒಂದು ಜೀವಿಯೇ ಅನೇಕ ಜೀವಶಾಸ್ತ್ರೀಯ ಪ್ರಶ್ನೆಗಳಿಗೆ ಉತ್ತರವಾಗಿರುತ್ತದೆ.

ಪ್ಲಾಟಿಪಸ್ ವಿಕಾಸದ ಹಾದಿ

ವೈಜ್ಞಾನಿಕವಾಗಿ ಪ್ಲಾಟಿಪಸ್ ಅನ್ನು ಆರ್ನಿಥೋರಿಂಕಸ್ ಅನಾಟಿನಸ್ ಎಂದು ಕರೆಯುತ್ತಾರೆ. ಇದು ಮುಖ್ಯವಾಗಿ ಆಸ್ಟ್ರೇಲಿಯಾದ ಪೂರ್ವ ಭಾಗ ಮತ್ತು ಟಾಸ್ಮೇನಿಯಾದ ತಾಜಾ ನೀರಿನ ನದಿಗಳು, ಹರಿವುಗಳು, ಸರೋವರಗಳು ಮತ್ತು ಅವುಗಳ ತೀರ ಪ್ರದೇಶಗಳಲ್ಲಿ ಕಂಡುಬರುವ ಅರ್ಧ-ಜಲಚರ ಸ್ತನಿ. ಇದು ತಾಜಾ ನೀರಿನ ಪರಿಸರಕ್ಕೆ ಅತ್ಯಂತ ನಿಕಟವಾಗಿ ಹೊಂದಿಕೊಂಡಿರುವ ಜೀವಿ.

ಪ್ಲಾಟಿಪಸ್‌ನ್ನು ವಿಕಾಸವಾದದ ದೃಷ್ಟಿಯಿಂದ ನೋಡಿದರೆ, ಅದು ಸ್ತನಿಗಳ ಇತಿಹಾಸದ ಅತ್ಯಂತ ಆಸಕ್ತಿದಾಯಕ ಜೀವಿಗಳಲ್ಲಿ ಒಂದು. ಪ್ಲಾಟಿಪಸ್ ಮೋನೋಟ್ರೀಮ್ ಎಂಬ ಮೊಟ್ಟೆ ಇಡುವ ಸ್ತನಿಗಳ ಗುಂಪಿಗೆ ಸೇರಿದೆ. ಈ ಗುಂಪು ಇತರ ಸ್ತನಿಗಳಾದ ಮಾರ್ಸುಪಿಯಲ್‌ಗಳು ಮತ್ತು ಪ್ಲಾಸೆಂಟಲ್ ಸ್ತನಿಗಳಿಂದ ಬಹಳ ಹಿಂದೆಯೇ ಬೇರ್ಪಟ್ಟ ಪ್ರಾಚೀನ ಜೀವಿಯಾಗಿದೆ. ಆದ್ದರಿಂದ ಪ್ಲಾಟಿಪಸ್‌ನಲ್ಲಿ ಮೊಟ್ಟೆ ಇಡುವಿಕೆ, ಹಾಲುಣಿಸುವಿಕೆ, ಜಲನಿರೋಧಕ ಕೂದಲು, ವಿದ್ಯುತ್ ಸಂವೇದನೆಯ ಕೊಕ್ಕು ಮತ್ತು ಗಂಡಿನ ವಿಷಮುಳ್ಳು ಇವೆಲ್ಲ ಒಂದೇ ದೇಹದಲ್ಲಿ ಕಾಣಿಸಿಕೊಳ್ಳುವುದು ಒಂದಿಷ್ಟು ವಿಚಿತ್ರ ಆದರೆ ಅಸಹಜವಲ್ಲ. ಅದು ದೀರ್ಘಕಾಲದ ವಿಕಾಸ, ಪರಿಸರದ ಒತ್ತಡ ಮತ್ತು ನದಿ ಜೀವನಕ್ಕೆ ಹೊಂದಾಣಿಕೆಯ ಫಲ. ಪ್ಲಾಟಿಪಸ್ ವಿಕಾಸವು ಸರಳ ರೇಖೆಯಂತೆ ನಡೆಯುವುದಿಲ್ಲ. ಜೀವಿಗಳು ತಮ್ಮ ಪರಿಸರಕ್ಕೆ ತಕ್ಕಂತೆ ವಿಭಿನ್ನ ದಾರಿಗಳಲ್ಲಿ ರೂಪುಗೊಳ್ಳುತ್ತವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಹೀಗಾಗಿ ಪ್ಲಾಟಿಪಸ್ಅನ್ನು ಕೇವಲ ವಿಚಿತ್ರ ಪ್ರಾಣಿ ಎಂದು ನೋಡುವುದಕ್ಕಿಂತ, ಸ್ತನಿಗಳ ವಿಕಾಸದ ಹಳೆಯ ದಾರಿಯನ್ನು ಇಂದಿಗೂ ನೆನಪಿಸುವ ಜೀವಶಾಸ್ತ್ರೀಯ ಸಾಕ್ಷಿ ಎಂದು ನೋಡುವುದು ಹೆಚ್ಚು ಸರಿಯಾದುದು. ಮೋನೋಟ್ರೀಮ್‌ಗಳ ವರ್ಗಕ್ಕೆ ಸೇರಿದ ಪ್ಲಾಟಿಪಸ್ಸುಗಳು ಮತ್ತು ಎಕಿಡ್ನಾಗಳು ಇತರ ಸ್ತನಿಗಳಿಂದ ಸುಮಾರು 166 ಮಿಲಿಯನ್ ವರ್ಷಗಳ ಹಿಂದೆ ಬೇರ್ಪಟ್ಟಿವೆ ಕಾರಣ ಇದನ್ನು ಇಂದಿಗೂ ಜೀವಂತವಾಗಿರುವ ವಿಕಾಸದ ದೀರ್ಘ ಇತಿಹಾಸದಲ್ಲಿ ಉಳಿದಿರುವ ಅತ್ಯಂತ ಪ್ರಾಚೀನ ಸ್ತನಿ ಎಂದು ಹೆಸರಿಸಬಹುದು.

ಪ್ಲಾಟಿಪಸ್ಃ ಮೊಟ್ಟೆ ಇಡುವ ಅರೆಸ್ತನಿ ಪಕ್ಷಿ

ಸ್ತನಿ ಎಂದರೆ ಸಾಮಾನ್ಯವಾಗಿ ಮರಿಗಳಿಗೆ ಜನ್ಮ ನೀಡುವ, ಹಾಲುಣಿಸುವ, ದೇಹದಲ್ಲಿ ಕೂದಲು ಹೊಂದಿರುವ ಮತ್ತು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ಪ್ರಾಣಿ ಎಂದು ನಾವು ಭಾವಿಸುತ್ತೇವೆ. ಆದರೆ ಪ್ಲಾಟಿಪಸ್ ಈ ಸಾಮಾನ್ಯ ಕಲ್ಪನೆಗೆ ವಿಶಿಷ್ಟ ತಿರುವು ನೀಡುತ್ತದೆ. ಇದು ಸ್ತನಿ ಆಗಿದ್ದರೂ ಮೊಟ್ಟೆ ಇಡುತ್ತದೆ. ಪ್ಲಾಟಿಪಸ್ ಮತ್ತು ಎಕಿಡ್ನಾ ಸೇರಿ ಮೋನೋಟ್ರೀಮ್ ಎಂದು ಕರೆಯಲ್ಪಡುವ ಅಪರೂಪದ ಸ್ತನಿಗಳ ಗುಂಪಿಗೆ ಸೇರಿವೆ. ಇಂದಿನ ಜಗತ್ತಿನಲ್ಲಿ ಬದುಕಿರುವ ಮೊಟ್ಟೆ ಇಡುವ ಸ್ತನಿಗಳು ಅತ್ಯಂತ ಕಡಿಮೆ. ಆದ್ದರಿಂದ ಪ್ಲಾಟಿಪಸ್ ಒಂದು ಸಾಮಾನ್ಯ ಸ್ತನಿ ಅಲ್ಲ. ಇದೊಂದು “ಅರ್ಧ ಹಕ್ಕಿ, ಅರ್ಧ ಸ್ತನಿ” ಎಂದು ಕೆಲವರು ವಿವರಿಸುತ್ತಾರೆ ಈ ವಿವರಣೆ ಸರಿಹೊಂದುವುದಿಲ್ಲ. ಪ್ಲಾಟಿಪಸ್ ಸ್ತನಿ ಆದರೆ ಪಕ್ಕಾ ಬೆಳೆದ ಸ್ತನದ ಗ್ರಂಥಿಗಳು ಅಥವಾ ಕಾರ್ಯಗಳಿಲ್ಲ. ಮೋನೋಟ್ರೀಮ್ ವಿಕಾಸ ಕೊಂಡಿಗೆ ಸೇರಿದ ಇದೊಂದು "ಅರೆಸ್ತನಿ ಪಕ್ಷಿ" ಎನ್ನಬಹುದು. ಪ್ಲಾಟಿಪಸ್ ಜೀವವಿಕಾಸದ ದಾರಿಗಳಲ್ಲಿ ಉಳಿದಿರುವ ಒಂದು ವಿಶಿಷ್ಟ ಜೀವಂತ ಪಳೆಯುಳಿಕೆ.

ಸಂತಾನೋತ್ಪತ್ತಿ

ಹೆಣ್ಣು ಪ್ಲಾಟಿಪಸ್ ಸಂತಾನೋತ್ಪತ್ತಿ ಕಾಲದಲ್ಲಿ ನದಿಯ ತೀರದಲ್ಲಿ ಉದ್ದವಾದ ಗೂಡು ಬಿಲವನ್ನು ತೋಡುತ್ತದೆ. ಆ ಬಿಲದ ಒಳಗೆ ಮೃದುವಾದ ಸಸ್ಯದ ತುಂಡುಗಳು, ಎಲೆಗಳು ಮತ್ತು ತೇವಾಂಶ ಹೊಂದಿರುವ ವಸ್ತುಗಳನ್ನು ತೆಗೆದುಕೊಂಡು ಹೋಗಿ ಸುರಕ್ಷಿತ ಗೂಡು ಸಿದ್ಧಪಡಿಸುತ್ತದೆ. ನಂತರ ಸಾಮಾನ್ಯವಾಗಿ ಒಂದು ಅಥವಾ ಎರಡು ಮೊಟ್ಟೆಗಳನ್ನು ಇಡುತ್ತದೆ. ಈ ಮೊಟ್ಟೆಗಳು ಹಕ್ಕಿಗಳ ಮೊಟ್ಟೆಯಂತೆ ಕಠಿಣ ಚಿಪ್ಪು ಹೊಂದಿರುವುದಿಲ್ಲ. ಅವು ಹೆಚ್ಚು ಮೃದುವಾದ ಚರ್ಮದಂತಿರುವ ಹೊರಪದರ ಹೊಂದಿರುತ್ತವೆ. ತಾಯಿ ಪ್ಲಾಟಿಪಸ್ ತನ್ನ ದೇಹದ ಉಷ್ಣತೆಯಿಂದ ಆ ಮೊಟ್ಟೆಗಳನ್ನು ಕಾಯುತ್ತದೆ. ನದಿಯ ಹೊರ ಜಗತ್ತಿನಲ್ಲಿ ನೀರಿನ ಹರಿವು, ಮಣ್ಣು, ಚಳಿ ಮತ್ತು ಶತ್ರುಗಳ ಅಪಾಯಗಳಿದ್ದರೂ, ಬಿಲದ ಒಳಗೆ ತಾಯಿ ತನ್ನ ಮರಿಗಳ ಮೊದಲ ರಕ್ಷಣಾ ವ್ಯವಸ್ಥೆಯಾಗಿರುತ್ತದೆ.

ಹಾಲು ಇದೆ-ಆದರೆ ಮೊಲೆತೊಟ್ಟು ಇಲ್ಲ

ಪ್ಲಾಟಿಪಸ್ ಮೊಟ್ಟೆ ಇಡುತ್ತದೆ ಎಂದು ಹೇಳಿದರೆ ಅದು ಸ್ತನಿ ಅಲ್ಲವೆಂದು ಕೆಲವರಿಗೆ ಭಾಸವಾಗಬಹುದು. ಆದರೆ ಅದು ಮರಿಗಳಿಗೆ ಹಾಲುಣಿಸುತ್ತದೆ. ಅದೇ ಅದನ್ನು ಸ್ತನಿ ಪ್ರಾಣಿಗಳಲ್ಲಿ ಇರಿಸುವ ಮುಖ್ಯ ಲಕ್ಷಣ. ಆದರೆ ಇಲ್ಲಿಯೂ ಮತ್ತೊಂದು ವಿಶೇಷತೆ ಇದೆ. ಪ್ಲಾಟಿಪಸ್‌ಗೆ ಸಾಮಾನ್ಯ ಸ್ತನಿಗಳಂತೆ ಸ್ಪಷ್ಟವಾದ ಮೊಲೆ ತೊಟ್ಟುಗಳಿಲ್ಲ. ಇದರರಲ್ಲಿ ಹೆಣ್ಣು ಪ್ರಾಣಿಯ ದೇಹದ ವಿಶೇಷ ಹಾಲು ಗ್ರಂಥಿಗಳಿಂದ ಹಾಲು ಚರ್ಮದ ಮೇಲ್ಮೈಗೆ ಸ್ರವಿಸುತ್ತದೆ. ರೋಮಗಳ ನಡುವೆ ಅಥವಾ ಚರ್ಮದ ಮೇಲಿನ ಸಣ್ಣ ಪ್ರದೇಶಗಳಲ್ಲಿ ಆ ಹಾಲು ಸೇರುತ್ತದೆ. ಮರಿ ಆ ಹಾಲನ್ನು ಚಪ್ಪರಿಸಿ ಕುಡಿಯುತ್ತದೆ. ಒಂದು ಪ್ರಾಣಿ ಮೊಟ್ಟೆ ಇಡುತ್ತದೆ, ಆದರೆ ಹಾಲುಣಿಸುತ್ತದೆ. ಆದರೆ ಮೊಲೆ ತೊಟ್ಟುಗಳಿಲ್ಲ. ಈ ಅಚ್ಚರಿಯ ಸಮನ್ವಯವೇ ಪ್ಲಾಟಿಪಸ್. ಇದನ್ನು ಜೀವಶಾಸ್ತ್ರದ ಅತ್ಯಂತ ಆಸಕ್ತಿದಾಯಕ ಜೀವಿಗಳಲ್ಲಿ ಒಂದಾಗಿ ಮಾಡುತ್ತದೆ.
ಪ್ಲಾಟಿಪಸ್ ಹಾಲು ಇತರ ಸ್ತನಿಗಳ ಹಾಲಿನಂತಿಯೇ ಇರುತ್ತದೆಯೇ?
ಪ್ಲಾಟಿಪಸ್ ಹಾಲು ಇತರ ಸ್ತನಿಗಳ ಹಾಲಿನಂತೆಯೇ ಮರಿಗಳಿಗೆ ಪೋಷಕಾಂಶ ನೀಡುತ್ತದೆ. ಆದರೆ ಅದರ ಸಂಯೋಜನೆ ಸಂಪೂರ್ಣವಾಗಿ ಹಸು ಅಥವಾ ಮನುಷ್ಯರ ಹಾಲಿನಂತೆಯೇ ಇರುವುದಿಲ್ಲ. ಪ್ಲಾಟಿಪಸ್ ಮೋನೋಟ್ರೀಮ್ ಸ್ತನಿಯಾಗಿರುವುದರಿಂದ ಅದರ ಹಾಲಿನಲ್ಲಿ ಮೋನೋಟ್ರೀಮ್‌ಗಳಿಗೆ ವಿಶೇಷವಾದ ಕೆಲವು ಪ್ರೋಟೀನ್‌ಗಳು ಕಂಡುಬರುತ್ತವೆ. ವಿಶೇಷವಾಗಿ, ಮರಿ ಮೊಲೆತೊಟ್ಟಿಯಿಂದ ಹಾಲು ಕುಡಿಯುವುದಿಲ್ಲ; ತಾಯಿಯ ಚರ್ಮ ಮತ್ತು ಕೂದಲಿನ ಮೇಲ್ಮೈಯಲ್ಲಿ ಸ್ರವಿಸುವ ಹಾಲನ್ನು ಚಪ್ಪರಿಸುತ್ತದೆ. ಆದ್ದರಿಂದ ಈ ಹಾಲಿನಲ್ಲಿ ಪೋಷಕಾಂಶಗಳ ಜೊತೆಗೆ ರೋಗಾಣುಗಳಿಂದ ರಕ್ಷಿಸಲು ಸಹಾಯಕವಾಗುವ ಜೀವಾಣು ನಿರೋಧಕ ಗುಣಗಳಿಗೂ ವಿಶೇಷ ಮಹತ್ವವಿದೆ.

ಪ್ಲಾಟಿಪಸ್ ಹಾಲು ಹಸು ಅಥವಾ ಮಾನವನ ಹಾಲಿನಂತೆಯೇ ಸಾಮಾನ್ಯ ಹಾಲು ಅಲ್ಲ. ಅದರ ಸಂಯೋಜನೆ ಬಹಳ ವಿಭಿನ್ನವಾಗಿದೆ. ಪರಿಪಕ್ವ ಪ್ಲಾಟಿಪಸ್ ಹಾಲಿನಲ್ಲಿ ಒಟ್ಟು ಘನಾಂಶ ಸುಮಾರು 39% ವರೆಗೆ ಇರಬಹುದು; ಇದರಲ್ಲಿ ಕೊಬ್ಬು ಮತ್ತು ಪ್ರೋಟೀನ್ ಪ್ರಮಾಣವು ಹಸುವಿನ ಹಾಲಿಗಿಂತ ಬಹಳ ಹೆಚ್ಚು. ಹಸುವಿನ ಹಾಲಿನಲ್ಲಿ ಸಾಮಾನ್ಯವಾಗಿ ಕೊಬ್ಬು 3–4%, ಪ್ರೋಟೀನ್ ಸುಮಾರು 3.5% ಮತ್ತು ಲ್ಯಾಕ್ಟೋಸ್ ಸುಮಾರು 5% ಇರುತ್ತದೆ. ಆದರೆ ಪ್ಲಾಟಿಪಸ್ ಹಾಲಿನಲ್ಲಿ ಕಾರ್ಬೋಹೈಡ್ರೇಟ್ ಸ್ವರೂಪ ಭಿನ್ನವಾಗಿದ್ದು, ಫ್ಯೂಕೋಸ್‌ ಸಮೃದ್ಧ ಸಕ್ಕರೆ ಅಂಶಗಳು ಕಂಡುಬರುತ್ತವೆ.

ಬಾತುಕೋಳಿಯ ಕೊಕ್ಕಿನಂತೆ ಕಾಣುವ ಸಂವೇದಕ

ಪ್ಲಾಟಿಪಸ್‌ನ ಮುಖದ ಭಾಗವೇ ಅದನ್ನು ತಕ್ಷಣ ಗುರುತಿಸಲು ಸಹಾಯ ಮಾಡುತ್ತದೆ. ಅದರ ಅಗಲವಾದ, ಮೃದುವಾದ, ಸಮತಟ್ಟಾದ ಕೊಕ್ಕಿನಂತಿರುವ ರಚನೆಯನ್ನು ನೋಡಿದರೆ ಬಾತುಕೋಳಿ ನೆನಪಾಗಬಹುದು. ಆದರೆ ಅದು ಕೇವಲ ಕೊಕ್ಕಿನಂತಿರುವ ಆಕಾರವಲ್ಲ. ಅದು ಅತ್ಯಂತ ಸೂಕ್ಷ್ಮ ಸಂವೇದಕ ಅಂಗ.
ಪ್ಲಾಟಿಪಸ್ ನೀರಿನಲ್ಲಿ ಮುಳುಗಿದಾಗ ಕಣ್ಣು, ಕಿವಿ ಮತ್ತು ಮೂಗಿನ ದ್ವಾರಗಳನ್ನು ಮುಚ್ಚಿಕೊಳ್ಳುತ್ತದೆ. ಹಾಗಾದರೆ ಅದು ನೀರಿನೊಳಗೆ ಆಹಾರವನ್ನು ಹೇಗೆ ಹುಡುಕುತ್ತದೆ? ಅದಕ್ಕೆ ಉತ್ತರ-ವಿದ್ಯುತ್ ಸಂವೇದನೆ.
ನೀರಿನ ತಳದಲ್ಲಿ ಚಲಿಸುವ ಸಣ್ಣ ಜಲಜ ಜೀವಿಗಳು, ಕೀಟಗಳ ಲಾರ್ವಾ, ಹುಳುಗಳು ಮತ್ತು ಏಡಿಗಳು ತಮ್ಮ ಸ್ನಾಯು ಚಲನೆಯಿಂದ ಅತಿ ಸೂಕ್ಷ್ಮ ವಿದ್ಯುತ್ ಸಂಕೇತಗಳನ್ನು ಉಂಟುಮಾಡುತ್ತವೆ. ಪ್ಲಾಟಿಪಸ್‌ನ ಕೊಕ್ಕಿನಲ್ಲಿರುವ ವಿಶೇಷ ಸಂವೇದಕಗಳು ಆ ಸಂಕೇತಗಳನ್ನು ಗ್ರಹಿಸುತ್ತವೆ. ಹೀಗಾಗಿ ಅದು ಕಣ್ಣುಗಳಿಂದ ಮಾತ್ರವಲ್ಲ, ವಿದ್ಯುತ್ ಸಂಕೇತಗಳ ಮೂಲಕವೂ ನೀರಿನೊಳಗಿನ ಜೀವಿಗಳನ್ನು ಗುರುತಿಸುತ್ತದೆ.

ನದಿಯ ತಳದ ಬೇಟೆಗಾರ

ಪ್ಲಾಟಿಪಸ್ ದೊಡ್ಡ ಬೇಟೆಗಾರನಂತೆ ಕಾಣುವುದಿಲ್ಲ. ಆದರೆ ಅದು ತನ್ನ ಪರಿಸರದಲ್ಲಿ ಅತ್ಯಂತ ಸೂಕ್ತವಾಗಿ ಹೊಂದಿಕೊಂಡ ಆಹಾರ ಹುಡುಕುವ ಜೀವಿ. ಇದು ಮುಖ್ಯವಾಗಿ ಜಲಜ ಕೀಟಗಳ ಲಾರ್ವಾ, ಹುಳುಗಳು, ಸಣ್ಣ ಏಡಿಗಳು, ಕುರ್ಲಿಗಳು ಮತ್ತು ನದಿಯ ತಳದಲ್ಲಿ ದೊರೆಯುವ ಸಣ್ಣ ಜೀವಿಗಳನ್ನು ತಿನ್ನುತ್ತದೆ. ಇದು ಪ್ರಕೃತಿಯಲ್ಲಿನ ಅತ್ಯಂತ ನಾಜೂಕಾದ ಬೇಟೆ ಹುಡುಕುವ ವಿಧಾನಗಳಲ್ಲಿ ಒಂದು. ಕತ್ತಲೆಯ ನೀರಿನಲ್ಲಿ, ಕಣ್ಣು ಮುಚ್ಚಿಕೊಂಡೇ, ಪ್ಲಾಟಿಪಸ್ ತನ್ನ ಕೊಕ್ಕಿನಿಂದ ಜೀವಂತ ಆಹಾರದ ಚಲನೆಯನ್ನು ಅರಿಯುತ್ತದೆ.

ನೀರಿನೊಳಗೆ ಮುಳುಗಿ, ತಳದ ಮಣ್ಣು ಮತ್ತು ಕಲ್ಲುಗಳ ನಡುವೆ ತನ್ನ ಕೊಕ್ಕಿನಿಂದ ಆಹಾರ ಹುಡುಕುತ್ತದೆ. ಆಹಾರವನ್ನು ತಕ್ಷಣ ನುಂಗದೆ, ಗಲ್ಲದ ಚೀಲಗಳಲ್ಲಿ ಸಂಗ್ರಹಿಸಿಕೊಳ್ಳುತ್ತದೆ. ನಂತರ ಮೇಲ್ಮೈಗೆ ಬಂದು ಅದನ್ನು ತಿನ್ನುತ್ತದೆ. ವಯಸ್ಕ ಪ್ಲಾಟಿಪಸ್‌ಗೆ ಹಲ್ಲುಗಳಿಲ್ಲ. ಹಲ್ಲಿನ ಬದಲು ಬಾಯಿಯೊಳಗಿನ ಕಠಿಣ ಕೇರಟಿನ್‌ ಪದರಗಳ ಸಹಾಯದಿಂದ ಆಹಾರವನ್ನು ಅರೆದು ನುಂಗುತ್ತದೆ. ಇದು ಹಲ್ಲಿಲ್ಲದರೂ ಆಹಾರ ಸಂಸ್ಕರಿಸಲು ಹೊಂದಿಕೊಂಡಿರುವ ವಿಶಿಷ್ಟ ವ್ಯವಸ್ಥೆ.

ನದಿಗೆ ಹೊಂದಿಕೊಂಡ ದೇಹ

ಪ್ಲಾಟಿಪಸ್‌ನ ದೇಹವನ್ನು ಗಮನಿಸಿದರೆ ಅದು ನದಿ ಜೀವನಕ್ಕೆ ಹೇಗೆ ಹೊಂದಿಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಅದರ ದೇಹ ಚಪ್ಪಟೆ, ಉದ್ದ ಮತ್ತು ನೀರಿನಲ್ಲಿ ಸುಲಭವಾಗಿ ಚಲಿಸುವಂತೆ ರೂಪುಗೊಂಡಿದೆ. ಮುಂಭಾಗದ ಕಾಲುಗಳಲ್ಲಿ ಜಾಲರಿಯಂತಿರುವ ಚರ್ಮವಿದ್ದು, ಅವು ಈಜಲು ಮುಖ್ಯ ಪಂಕಗಳಂತೆ ಕೆಲಸ ಮಾಡುತ್ತವೆ.
ಹಿಂಬದಿ ಕಾಲುಗಳು ಮತ್ತು ಬಾಲ ದಿಕ್ಕು ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ. ಬಾಲ ಕೇವಲ ದಿಕ್ಕು ತಿರುಗಿಸಲು ಮಾತ್ರವಲ್ಲ; ಕೊಬ್ಬು ಸಂಗ್ರಹಿಸಲು ಸಹ ಉಪಯುಕ್ತ. ಆಹಾರ ಕಡಿಮೆಯಾದ ಸಂದರ್ಭಗಳಲ್ಲಿ ಈ ಕೊಬ್ಬಿನ ಸಂಗ್ರಹ ಶಕ್ತಿಯ ಮೂಲವಾಗಬಹುದು. ಪ್ಲಾಟಿಪಸ್‌ನ ದೇಹದ ಮೇಲೆ ದಟ್ಟವಾದ, ಜಲನಿರೋಧಕ ಕೂದಲು ಇರುತ್ತದೆ. ಇದು ತಂಪಾದ ನೀರಿನಲ್ಲಿ ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ಹೊರಗೆ ನೋಡಲು ಸರಳವಾದ ಕೂದಲುಗಳಂತೆ ಕಾಣುವ ಈ ರಚನೆ, ವಾಸ್ತವದಲ್ಲಿ ತಂಪು ನೀರಿನಲ್ಲಿ ಬದುಕಲು ಅಗತ್ಯವಾದ ಉಷ್ಣ ಕವಚವಾಗಿದೆ.

ವಿಷಮುಳ್ಳು ಹೊಂದಿರುವ ಸ್ತನಿ

ಸ್ತನಿಗಳಲ್ಲಿ ವಿಷದ ವ್ಯವಸ್ಥೆ ಬಹಳ ಅಪರೂಪ. ಆದರೆ ಪ್ಲಾಟಿಪಸ್‌ನಲ್ಲಿ ಮತ್ತೊಂದು ವಿಶೇಷತೆ ಇದೆ. ಗಂಡು ಪ್ಲಾಟಿಪಸ್‌ನ ಹಿಂಬದಿ ಕಾಲಿನ ಕಣಕಾಲು ಭಾಗದಲ್ಲಿ ತೀಕ್ಷ್ಣವಾದ ಮುಳ್ಳು ಇರುತ್ತದೆ. ಈ ಮುಳ್ಳು ವಿಷಗ್ರಂಥಿಯೊಂದಿಗೆ ಸಂಪರ್ಕ ಹೊಂದಿದೆ.

ಈ ವಿಷವು ಸಾಮಾನ್ಯವಾಗಿ ಆಹಾರ ಹಿಡಿಯಲು ಬಳಸುವ ಪ್ರಮುಖ ಆಯುಧವಲ್ಲ. ಸಂತಾನೋತ್ಪತ್ತಿ ಕಾಲದಲ್ಲಿ ಗಂಡು ಪ್ಲಾಟಿಪಸ್‌ಗಳ ನಡುವಿನ ಸ್ಪರ್ಧೆಯಲ್ಲಿ ಇದಕ್ಕೆ ಪಾತ್ರ ಇರಬಹುದು ಎಂದು ವಿಜ್ಞಾನಿಗಳು ವಿವರಿಸುತ್ತಾರೆ. ಮಾನವನಿಗೆ ಇದು ಸಾಮಾನ್ಯವಾಗಿ ಮರಣಕಾರಿಯಾಗುವುದಿಲ್ಲ. ಆದರೆ ತೀವ್ರ ನೋವು, ಊತ ಮತ್ತು ದೀರ್ಘಕಾಲದ ಅಸ್ವಸ್ಥತೆಯನ್ನು ಉಂಟುಮಾಡಬಲ್ಲದು.

ತಪ್ಪು ಕಲ್ಪನೆಗಳು

ಪ್ಲಾಟಿಪಸ್ ಬಗ್ಗೆ ಕೇಳುವಾಗ ಕೆಲವರಿಗೆ ಇದು ಬೇರೆ ಬೇರೆ ಪ್ರಾಣಿಗಳ ಭಾಗಗಳನ್ನು ಸೇರಿಸಿದಂತಿದೆ ಎಂಬ ಭಾವನೆ ಬರುತ್ತದೆ. ಆದರೆ ಅದು ಕೇವಲ ಹೊರನೋಟ ಮಾತ್ರ. ಪ್ಲಾಟಿಪಸ್ ಬಾತುಕೋಳಿ, ಬೀವರ್ ಮತ್ತು ಒಟರ್‌ಗಳ ಮಿಶ್ರಣವಲ್ಲ. ಅದು ತನ್ನದೇ ಆದ ವಿಕಾಸದ ದಾರಿಯಲ್ಲಿ ರೂಪುಗೊಂಡ ಸ್ವತಂತ್ರ ಸ್ತನಿ.

ಅದರ ಬಾತುಕೋಳಿ ತರದ ಕೊಕ್ಕು ಆಹಾರ ಹುಡುಕುವ ಸಂವೇದಕ. ಅದರ ಜಾಲರಿ ಕಾಲುಗಳು ಈಜಲು. ಅದರ ಬಾಲ ಕೊಬ್ಬಿನ ಸಂಗ್ರಹ ಮತ್ತು ದಿಕ್ಕು ನಿಯಂತ್ರಣಕ್ಕೆ. ಅದರ ದಟ್ಟ ಕೂದಲು ತಂಪು ನೀರಿನ ವಿರುದ್ಧ. ಅದರ ಮೊಟ್ಟೆ ಇಡುವಿಕೆ ಮೋನೋಟ್ರೀಮ್ ವಂಶದ ಲಕ್ಷಣ. ಅದರ ಹಾಲುಣಿಸುವಿಕೆ ಸ್ತನಿತ್ವದ ಮೂಲ ಗುರುತು. ಪ್ರಕೃತಿಯಲ್ಲಿ ವಿಚಿತ್ರವೆನಿಸುವ ಪ್ರತಿಯೊಂದು ಲಕ್ಷಣವೂ ವ್ಯರ್ಥವಲ್ಲ. ಸರಿಯಾದ ಪರಿಸರದಲ್ಲಿ ಅದು ಬದುಕುಳಿಯುವ ವಿಜ್ಞಾನ.

ಪ್ಲಾಟಿಪಸ್ ಮತ್ತು ನದಿಗಳ ಆರೋಗ್ಯ

ಪ್ಲಾಟಿಪಸ್ ಬದುಕು ನದಿಗಳೊಂದಿಗೆ ಜೋಡಿಸಿಕೊಂಡಿದೆ. ಶುದ್ಧ ಹರಿವು, ಮಣ್ಣಿನ ತೀರ, ಬಿಲ ತೋಡಲು ಸೂಕ್ತವಾದ ದಡ, ತಳದಲ್ಲಿ ಸಾಕಷ್ಟು ಸಣ್ಣ ಜಲಜ ಜೀವಿಗಳು- ಇವೆಲ್ಲವೂ ಪ್ಲಾಟಿಪಸ್ ಬದುಕಿಗೆ ಅಗತ್ಯ.
ನದಿಯ ಹರಿವು ಕಡಿಮೆಯಾದರೆ, ದಡಗಳು ಕುಸಿದರೆ, ನೀರು ಮಾಲಿನ್ಯಗೊಂಡರೆ ಅಥವಾ ಜಲಜೀವಿಗಳ ಸಂಖ್ಯೆ ಕಡಿಮೆಯಾದರೆ ಪ್ಲಾಟಿಪಸ್ ನೇರವಾಗಿ ಪರಿಣಾಮ ಅನುಭವಿಸುತ್ತದೆ. ಅಣೆಕಟ್ಟುಗಳು, ಅತಿಯಾದ ನೀರು ಬಳಕೆ, ನಗರೀಕರಣ, ಕೃಷಿ ಹರಿವು, ಬರ, ಹವಾಮಾನ ಬದಲಾವಣೆ, ಮೀನುಗಾರಿಕೆ ಬಲೆಗಳು ಮತ್ತು ನದಿಯ ತೀರದ ಹಾನಿ ಇವುಗಳೆಲ್ಲ ಪ್ಲಾಟಿಪಸ್ ವಾಸಸ್ಥಳಕ್ಕೆ ಅಪಾಯ ಉಂಟುಮಾಡಬಹುದು.
ಅದಕ್ಕಾಗಿ ಪ್ಲಾಟಿಪಸ್ ಸಂರಕ್ಷಣೆ ಎಂದರೆ ಕೇವಲ ಒಂದು ವಿಚಿತ್ರ ಪ್ರಾಣಿಯನ್ನು ಉಳಿಸುವುದು ಅಲ್ಲ. ಅದು ತಾಜಾ ನೀರಿನ ನದಿಗಳನ್ನು ಉಳಿಸುವುದು. ನದಿಯ ಆರೋಗ್ಯ ಉಳಿದರೆ ಪ್ಲಾಟಿಪಸ್ ಉಳಿಯುತ್ತದೆ; ಪ್ಲಾಟಿಪಸ್ ಉಳಿದರೆ ಆ ನದಿಯ ಜೀವ ವೈವಿಧ್ಯದ ಕಥೆಯೂ ಉಳಿಯುತ್ತದೆ.

ಪ್ಲಾಟಿಪಸ್‌ನ ಕೆಲವು ಕುತೂಹಲಕಾರಿ ವಿಷಯಗಳು;
• ಪ್ಲಾಟಿಪಸ್ ಮೊಟ್ಟೆ ಇಡುವ ಸ್ತನಿ.
• ಹೆಣ್ಣು ಪ್ಲಾಟಿಪಸ್ ಹಾಲುಣಿಸುತ್ತದೆ, ಆದರೆ ಮೊಲೆ ತೊಟ್ಟುಗಳಿಲ್ಲ.
• ವಯಸ್ಕ ಪ್ಲಾಟಿಪಸ್‌ಗೆ ಹಲ್ಲುಗಳಿಲ್ಲ.
• ಪ್ಲಾಟಿಪಸ್ ನೀರಿನಲ್ಲಿ ಮುಳುಗಿದಾಗ ಕಣ್ಣು, ಕಿವಿ ಮತ್ತು ಮೂಗಿನ ದ್ವಾರಗಳನ್ನು ಮುಚ್ಚಿಕೊಳ್ಳುತ್ತದೆ.
• ಕೊಕ್ಕಿನಲ್ಲಿರುವ ವಿದ್ಯುತ್ ಸಂವೇದಕಗಳ ಸಹಾಯದಿಂದ ಅದು ನೀರಿನೊಳಗಿನ ಬೇಟೆಯನ್ನು ಗುರುತಿಸುತ್ತದೆ.
• ಗಂಡು ಪ್ಲಾಟಿಪಸ್ ಹಿಂಬದಿ ಕಾಲಿನಲ್ಲಿ ವಿಷಮುಳ್ಳು ಹೊಂದಿರುತ್ತದೆ.
• ಅದರ ದಟ್ಟ ಜಲನಿರೋಧಕ ಕೂದಲು ತಂಪು ನೀರಿನಲ್ಲಿ ದೇಹದ ಉಷ್ಣತೆಯನ್ನು ಕಾಪಾಡುತ್ತದೆ.
• ಬಾಲದಲ್ಲಿ ಕೊಬ್ಬಿನ ಸಂಗ್ರಹ ಇರುತ್ತದೆ.

ಪ್ಲಾಟಿಪಸ್ ನಮಗೆ ಕಲಿಸುವ ಪಾಠ

ಪ್ಲಾಟಿಪಸ್ ಅನ್ನು ನೋಡಿದಾಗ ಪ್ರಕೃತಿಯ ವೈವಿಧ್ಯ ಎಷ್ಟು ವಿಶಾಲವೋ ತಿಳಿಯುತ್ತದೆ. ಎಲ್ಲ ಸ್ತನಿಗಳೂ ಒಂದೇ ರೀತಿಯಲ್ಲಿರಬೇಕೆಂಬ ನಿಯಮವಿಲ್ಲ. ಪ್ಲಾಟಿಪಸ್ ಶಾಂತ ನದಿಯ ಜೀವಿ. ಅದು ಗರ್ಜಿಸುವುದಿಲ್ಲ. ಭಯ ಹುಟ್ಟಿಸುವುದಿಲ್ಲ. ಆದರೆ ಅದರ ದೇಹದ ಪ್ರತಿಯೊಂದು ಭಾಗವೂ ವಿಕಾಸದ ಆಳವಾದ ಕಥೆಯನ್ನು ಹೇಳುತ್ತದೆ. ಅದರ ಕೊಕ್ಕು ಸಂವೇದನೆಯ ಕಥೆ ಹೇಳುತ್ತದೆ. ಅದರ ಮೊಟ್ಟೆ ಸ್ತನಿಗಳ ಹಳೆಯ ಇತಿಹಾಸವನ್ನು ನೆನಪಿಸುತ್ತದೆ. ಅದರ ಹಾಲು ತಾಯಿ ಆರೈಕೆಯ ಕಥೆ ಹೇಳುತ್ತದೆ. ಅದರ ವಿಷಮುಳ್ಳು ಅಪರೂಪದ ರಕ್ಷಣಾ ವ್ಯವಸ್ಥೆಯ ಕಥೆ ಹೇಳುತ್ತದೆ. ಅದರ ಜಲನಿರೋಧಕ ಕೂದಲು ನದಿ ಜೀವನದ ವಿಜ್ಞಾನವನ್ನು ಹೇಳುತ್ತದೆ.

ಕೊನೆಯ ಮಾತು

ಪ್ಲಾಟಿಪಸ್ ನಮಗೆ ಒಂದು ಸರಳ ಆದರೆ ಆಳವಾದ ಸಂದೇಶ ನೀಡುತ್ತದೆ. ಜೀವವನ್ನು ಒಂದು ವ್ಯಾಖ್ಯಾನದಲ್ಲಿ ಬಂಧಿಸಲು ಸಾಧ್ಯವಿಲ್ಲ. ಪ್ರಕೃತಿ ತನ್ನ ಉತ್ತರಗಳನ್ನು ಅನೇಕ ರೂಪಗಳಲ್ಲಿ ಬರೆಯುತ್ತದೆ. ಪ್ಲಾಟಿಪಸ್ ಅಂತಹ ಒಂದು ಉತ್ತರ-ಶಾಂತ, ವಿಚಿತ್ರ, ವೈಜ್ಞಾನಿಕ ಮತ್ತು ಅದ್ಭುತ.

ಡಾ: ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

India Snake bite capital of the world !
17/06/2026

India
Snake bite capital of the world !

30/05/2026

ಪ್ರಸಿದ್ದ ನಿಸರ್ಗವಾದಿ ಜೀವಶಾಸ್ತ್ರಜ್ಞ ಚಾರ್ಲ್ಸ್ ಡಾರ್ವಿನ್ 1862 ರಲ್ಲಿ
ಮಡಗಾಸ್ಕರ್ ದ್ವೀಪದಲ್ಲಿ 30 ಸೆಂಟಿಮೀಟರ್ ಗಿಂತ ಹೆಚ್ಚು ಉದ್ದವಾದ
ಮಕರಂದದ ಕೊಳವೆಯನ್ನು ಹೊಂದಿದ ಆರ್ಕಿಡ್ ಸಸ್ಯದ ಹೂವನ್ನು
ಅಧ್ಯಯನ ಮಾಡಿ,ಅಷ್ಟೇ ಉದ್ದವಾದ ನಾಲಿಗೆಯನ್ನು ಹೊಂದಿರುವ
ಪತಂಗವು ಆರ್ಕಿಡ್ ಹೂವನ್ನು ಪರಾಗಸ್ಪರ್ಶ ಮಾಡಲು ಈ ದ್ವೀಪದಲ್ಲಿ
ಅಸ್ತಿತ್ವದಲ್ಲಿ ಇರಬೇಕು, ಇಲ್ಲದ್ದಿದ್ದರೆ ಈ ಆರ್ಕಿಡ್ ಸಸ್ಯ ಬದುಕುಳಿಯಲು
ಸಾಧ್ಯವೇ ಇಲ್ಲ,ಎಂದು ಯಾರೂ ನೋಡಿರದ ಜೀವಿಯೊಂದರ ಅಸ್ತಿತ್ವದ
ಬಗ್ಗೆ ಭವಿಷ್ಯ ನುಡಿದ್ದಿದ್ದರು.
ಡಾರ್ವಿನ್ ಮೃತಪಟ್ಟು 21 ವರ್ಷಗಳ ನಂತರ ಅವರು ಊಹಿಸಿದಂತೆ
ಉದ್ದ ಮೂತಿಯ(proboscis) ಮಡಗಾಸ್ಕರ್ hawk ಪತಂಗವನ್ನು
(Xanthopan morganii praedicta) ವಿಜ್ಞಾನಿಗಳು ಕಂಡು ಹಿಡಿದರು.
ಒಂದು ಶತಮಾನಕ್ಕೂ ಹೆಚ್ಚಿನ ಸಮಯದ ನಂತರ 1992 ರಲ್ಲಿ ಡಾರ್ವಿನ್
ವಿವರಿಸಿದ ಆರ್ಕಿಡ್ ಹೂವನ್ನು ಪರಾಗಸ್ಪರ್ಶ ಮಾಡುತ್ತಿರುವ hawk
ಪತಂಗದ ಛಾಯಾ ಚಿತ್ರಗಳನ್ನು ಸಂಶೋದಕರು ಸೆರೆಹಿಡಿದರು.
142 ವರ್ಷಗಳ ನಂತರ ಪತಂಗದ ಆಹಾರ ಪ್ರಕ್ರಿಯೆಯ ಮೊದಲ
ವೀಡಿಯೋ ದಾಖಲಾತಿಯನ್ನು 2004 ರಲ್ಲಿ ಮಾಡಲಾಯಿತು.

orchid
morganii praedicta
Nagaraj Bellur
Nisarga Conservation Trust

ವಿಶ್ವ ಕೆನ್ನಾಯಿ ದಿನಮೇ 28
29/05/2026

ವಿಶ್ವ ಕೆನ್ನಾಯಿ ದಿನ
ಮೇ 28

ವಿಶ್ವ ಆಮೆಗಳ ದಿನಮೇ 23
23/05/2026

ವಿಶ್ವ ಆಮೆಗಳ ದಿನ
ಮೇ 23

16/05/2026

ಫಿಲಿಪೈನ್ಸ್ ಮಲೇಷ್ಯಾ ಇಂಡೋನೇಷ್ಯಾದ ಕರಾವಳಿ ಪ್ರದೇಶಗಳಲ್ಲಿ ಕಂಡು ಬರುವ ಬಜಾವು (Bajau) ಬುಡಕಟ್ಟು ಜನಾಂಗವನ್ನು Super human sea nomads ಎನ್ನುತ್ತಾರೆ.
ಈ ಬುಡಕಟ್ಟು ಜನರ ಜೀವನ ಬಹುತೇಕ ಸಮುದ್ರವನ್ನೇ ಅವಲಂಬಿಸಿದೆ, ಇವರು ಅಸಾಧಾರಣ ಈಜುಗಾರರು. ಯಾವುದೇ ಉಸಿರಾಟದ ಉಪಕರಣವಿಲ್ಲದೆ ನಿಮಿಷಗಟ್ಟಲೆ ನೀರಿನ ಆಳದಲ್ಲಿ ಇರಬಲ್ಲರು. ಮೀನು ಹಿಡಿಯುವುದು ಮತ್ತು ಸಮುದ್ರದ ಸಂಪನ್ಮೂಲಗಳನ್ನು ಸಂಗ್ರಹಿಸುವುದೇ ಇವರ ಮುಖ್ಯ ಕೆಲಸ. ತಮ್ಮ ಜೀವನದ ಬಹುಪಾಲು ಸಮಯವನ್ನು ಸಮುದ್ರದ ಮೇಲೆ ( ದೋಣಿ /ಮನೆಗಳಲ್ಲಿ ) ಕಳೆಯುತ್ತಾರೆ.

ಯಾವುದೇ diving suit ಇಲ್ಲದೆ ಸಮುದ್ರದ ಮೇಲ್ಮೈಯಿಂದ 200 ಅಡಿ ಆಳಕ್ಕೆ ಇಳಿಯಬಲ್ಲರು ಹಾಗೂ ಉಸಿರಾಟದ ಉಪಕರಣ ಇಲ್ಲದೆ 13 ನಿಮಿಷಗಳ ಕಾಲ ನೀರಿನೊಳಗೆ ಮುಳುಗಿ ಇರಬಲ್ಲರು.
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಬಜಾವು ಜನರ ದೇಹವು ತಲೆಮಾರುಗಳಿಂದ ಸಮುದ್ರ ಜೀವನಕ್ಕೆ ತಕ್ಕಂತೆ ವಿಕಾಸವಾಗಿದೆ, ಈ ಜನಾಂಗದವರ ಗುಲ್ಮ (Spleen) ಸಾಮಾನ್ಯ ಮನುಷ್ಯರಿಗಿಂತ ದೊಡ್ಡದಾಗಿದ್ದು,ಇದು ಹೆಚ್ಚು ಆಮ್ಲಜನಕವನ್ನು ಶೇಖರಿಸಿಟ್ಟುಕೊಂಡು ಹೆಚ್ಚು ಹೊತ್ತು ನೀರಿನೊಳಗೆ ಇರಲು ಸಹಾಯ ಮಾಡುತ್ತದೆ.
tribes
Nisarga Conservation Trust

ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಇತ್ತೀಚಿಗೆ ಪತ್ತೆಯಾದ ರೆಟಿಕ್ಯುಲೇಟೆಡ್ ಹೆಬ್ಬಾವು ಅತೀ ಉದ್ದವಾದ ಹಾವು ಎಂಬ ವಿಶ್ವ ದಾಖಲೆ ಹೊಂದಿದೆ.23 ಅ...
15/05/2026

ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಇತ್ತೀಚಿಗೆ ಪತ್ತೆಯಾದ ರೆಟಿಕ್ಯುಲೇಟೆಡ್ ಹೆಬ್ಬಾವು ಅತೀ ಉದ್ದವಾದ ಹಾವು ಎಂಬ ವಿಶ್ವ ದಾಖಲೆ ಹೊಂದಿದೆ.
23 ಅಡಿ 8 ಇಂಚುಗಳಷ್ಟು ಉದ್ದವಿರುವ ಈ ಹಾವು 96 ಕಿಲೋ ತೂಕ ಹೊಂದಿದೆ.
ಕಾಡಲ್ಲಿ(wild) ಪತ್ತೆಯಾದ ಹಾವು ಇದಾಗಿದ್ದು ಇದರ ಸಂರಕ್ಷಣೆಯೂ ಸವಾಲಿನ ಕೆಲಸವಾಗಿದೆ ಏಕೆಂದರೆ reticulated python ಗಳು ಕೆಲವು ಪ್ರಕರಣಗಳಲ್ಲಿ ಮನುಷ್ಯರನ್ನು ನುಂಗಿದ ದಾಖಲೆಗಳಿವೆ,ಹಾಗಾಗಿ ಕೆಲವರು ಈ ಜಾತಿಯ ಹಾವುಗಳನ್ನು ಕಂಡಾಗ ಕೊಲ್ಲುತ್ತಾರೆ.
ಹಸಿರು ಅನಕೊಂಡ ಹೆಬ್ಬಾವುಗಳು ಗಾತ್ರದಲ್ಲಿ ತುಂಬಾ ದೊಡ್ಡವಿರುತ್ತವೆ.
reticulated python ಹೆಚ್ಚು ಉದ್ದ ಬೆಳೆಯುತ್ತವೆ. ಸೆರೆಯಲ್ಲಿ (captivity) ಬೆಳೆದ ಕೆಲವು reticulated python ಗಳು 25 ಅಡಿಗೂ ಹೆಚ್ಚಿನ ಉದ್ದ ಬೆಳೆದ ದಾಖಲೆಗಳಿವೆ.
python

Nagaraj Bellur
Nisarga Conservation Trust

10/05/2026

ದಂಶಕಗಳ ಬಾಚಿಹಲ್ಲುಗಳು ಅವುಗಳ ಜೀವನದುದ್ದಕ್ಕೂ ನಿರಂತರವಾಗಿ ಬೆಳೆಯುತ್ತಿರುತ್ತವೆ. ಗಟ್ಟಿಯಾದ ಮೇಲ್ಮೈಗಳಲ್ಲಿ ನಿಯಮಿತವಾಗಿ ಕಡಿಯುವುದರಿಂದ ಬಾಚಿ ಹಲ್ಲುಗಳು ಅತಿಯಾಗಿ ಬೆಳೆಯದಂತೆ ತಡೆಯುತ್ತದೆ. ಬೀವರ್ ನಂತಹ ದಂಶಕಗಳು ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಲು ಹಲ್ಲುಗಳನ್ನು ಉಪಯೋಗಿಸುತ್ತವೆ.

Address

Vidyanagara
Shimoga
577203

Website

Alerts

Be the first to know and let us send you an email when Nisarga Conservation Trust posts news and promotions. Your email address will not be used for any other purpose, and you can unsubscribe at any time.

Shortcuts

Share