15/07/2024
ಜರ್ಮನಿಯಲ್ಲಿ ಯೂರೋಪಿನ ಪ್ರಥಮ ನಾವಿಕೋತ್ಸವ ವಿಶ್ವಕನ್ನಡ ಸಮ್ಮೇಳನ ಭರ್ಜರಿ ಯಶಸ್ಸು
--Detailed Report by Benki Basanna ಬೆಂಕಿ ಬಸಣ್ಣ ನ್ಯೂಯಾರ್ಕ್
7ನೇ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನ ಯುರೋಪಿನಲ್ಲಿ ಮೊಟ್ಟ ಮೊದಲ ಬಾರಿಗೆ ಶನಿವಾರ, ಜುಲೈ 6, ೨೦೨೪ ರಂದು ಜರ್ಮನಿಯ ಫ್ರಾಂಕ್ಫರ್ಟ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ನಾವಿಕ ಸಂಸ್ಥೆ ಈ ಸಮ್ಮೇಳನವನ್ನು ಜರ್ಮನಿಯ ರೈನ್-ಮೈನ್ ಕನ್ನಡ ಸಂಘ (RMKS) ಸಹಯೋಗದೊಂದಿಗೆ ಆಯೋಜಿಸಿತ್ತು. ಈ ಸಮ್ಮೇಳನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಇದರಲ್ಲಿ ಯೂರೋಪಿನ ವಿವಿಧ ದೇಶಗಳ ಸುಮಾರು 50 ಕ್ಕೂ ಹೆಚ್ಚು ಕನ್ನಡ ಸಂಘದವರು ಸಕ್ರೀಯವಾಗಿ ಭಾಗವಹಿಸಿದ್ದರು. ಈ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಅಮೇರಿಕಾದಿಂದ ಆಗಮಿಸಿದ ಸುಮಾರು 200 ಕನ್ನಡಾಭಿಮಾನಿಗಳಿಗಾಗಿ ಹನ್ನೊಂದು ದಿನಗಳ ಯೂರೋಪ್ ಟೂರ್ ಪ್ಯಾಕೇಜ್ ಅನ್ನು ಆಯೋಜಿಸಲಾಗಿತ್ತು.
ಈ ಸಮ್ಮೇಳನದಲ್ಲಿ "ಯುರೋಪಿನಲ್ಲಿ ಕನ್ನಡ ಭಾಷೆ ಅಭಿವೃದ್ಧಿಯ ಮತ್ತು ಕುಂದು ಕೊರತೆಗಳಲ್ಲಿ ಜರ್ಮನಿ ಮತ್ತು ಕರ್ನಾಟಕ ಸರ್ಕಾರದ ಸಹಕಾರದ ಅಗತ್ಯತೆ" ಎಂಬ ವಿಷಯದ ಮೇಲೆ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಜೊತೆಗೆ "ಯುರೋಪಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಮತ್ತು ಪ್ರಾಮುಖ್ಯತೆ" ವಿಷಯ ಮಂಡನೆಯನ್ನು ಏರ್ಪಡಿಸಲಾಗಿತ್ತು.
"ಈ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಂಗೀತ, ನಾಟಕ, ನೃತ್ಯ, ಗಾಯನ, ವೈದ್ಯಕೀಯ ವೇದಿಕೆ, ಕವಿ ಸಮ್ಮೇಳನ, ಕನ್ನಡ-ಕಲಿ ಹೀಗೆ ಹಲವಾರು ಕಾರ್ಯಕ್ರಮಗಳು ತುಂಬಾ ಯಶಸ್ವಿಯಾಗಿ ನಡೆದವು" ಎಂದು ನಾವಿಕ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್ ತಿಳಿಸಿದ್ದಾರೆ.
ನಾವಿಕ ಸಂಸ್ಥೆಯು ಬೆಸ ವರ್ಷಗಳಲ್ಲಿ ಅಮೆರಿಕದಲ್ಲಿಯೂ ಮತ್ತು ಸಮ ವರ್ಷಗಳಲ್ಲಿ ಅಮೆರಿಕದ ಹೊರಗಡ ಸಮ್ಮೇಳನಗಳನ್ನು ನಡೆಸುತ್ತಾ ಬಂದಿದೆ. 2022ರಲ್ಲಿ ಆಫ್ರಿಕಾ ಖಂಡದ ಕೀನ್ಯಾ ದೇಶದ ನೈರೋಬಿಯಲ್ಲಿ ನಾವಿಕೋತ್ಸವ ಸಮ್ಮೇಳನವನ್ನು ತುಂಬಾ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ವರ್ಷ ಜರ್ಮನಿಯಲ್ಲಿ ಆಯೋಜಿಸಲಾಗಿತ್ತು.
ಈ ಸಮ್ಮೇಳನಕ್ಕಾಗಿ ಕಳೆದ ಹಲವಾರು ತಿಂಗಳುಗಳಿಂದ ಅವಿರತವಾಗಿ ಶ್ರಮಿಸಿದ ಕಾರ್ಯಕರ್ತರಿಗೆ ನಾವಿಕ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್, ರೈನ್-ಮೈನ್ ಕನ್ನಡ ಸಂಘ (RMKS) ದ ಅಧ್ಯಕ್ಷರಾದ ವೇದ ಕುಮಾರಸ್ವಾಮಿ, ಸಂಚಾಲಕರಾದ ವಿಶ್ವನಾಥ ಬಾಳೇಕಾಯಿ, ಸಂಯೋಜಕರಾದ ರವೀಂದ್ರ ಕುಲಕರ್ಣಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸಮ್ಮೇಳನವು ಬೆಳಿಗ್ಗೆ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ಹಾಗೂ ಪ್ರೊ. ಕೃಷ್ಣೇಗೌಡ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ ನಡೆಸಿಕೊಟ್ಟ ಕನ್ನಡ ಸಾಹಿತ್ಯ ವೇದಿಕೆಯ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿದ್ದವು. ಈ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ "ಮೈನಾಕ" ಅನ್ನು ಬಿಡುಗಡೆ ಮಾಡಲಾಯಿತು.
ಸ್ಮರಣ ಸಂಚಿಕೆ "ಮೈನಾಕ" ಬಿಡುಗಡೆ :
ಜರ್ಮನಿ ಅಂದಾಕ್ಷಣ ಕನ್ನಡಿಗರ ನೆನಪಿಗೆ ಬರುವುದು ಇತಿಹಾಸದಲ್ಲಿಯೇ ಮೊಟ್ಟ ಮೊದಲ "ಕನ್ನಡ - ಇಂಗ್ಲಿಷ್" ಶಬ್ದಕೋಶವನ್ನು ರಚಿಸಿದ ಫೇರ್ಡಿನಂಡ್ ರಿವೆಂರಂಡ್ ಡಾ. ಕಿಟಲ್. ಈ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕಿಟಲ್ ಫ್ಯಾಮಿಲಿಯ ನಾಲ್ಕನೇ ಮತ್ತು 5ನೇ ತಲೆಮಾರಿನ (ಮರಿ ಮೊಮ್ಮಕ್ಕಳನ್ನು) ಸದಸ್ಯರಾದ ಅಲ್ಮುತ್ ಮೆಯೆರ್ ಕಿಟಲ್, ಯುವ್ಸ್ ಪಾಟ್ರಿಕ್ ಮೆಯೆರ್ ಮುಂತಾದವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿ ಸನ್ಮಾನಿಸಲಾಯಿತು.
ಈ ಸಮ್ಮೇಳನದ ಸ್ಮರಣ ಸಂಚಿಕೆ "ಮೈನಾಕ"ವನ್ನು ಮುಖ್ಯ ವೇದಿಕೆಯ ಮೇಲೆ ಜರ್ಮನಿಯಲ್ಲಿರುವ ಭಾರತದ ರಾಯಬಾರಿ ಸನ್ಮಾನ್ಯ ಪರ್ವತನೇನಿ ಹರೀಶ್ ಮತ್ತು ಕಿಟ್ಟಲ್ ಕುಟುಂಬದವರು ಬಿಡುಗಡೆ ಮಾಡಿದರು. ಈ ಸಮ್ಮೇಳನದ ಸ್ಮರಣ ಸಂಚಿಕೆ "ಮೈನಾಕ" ತುಂಬಾ ಸೊಗಸಾಗಿ ಹೊರಬಂದಿದ್ದು ಇದರಲ್ಲಿ ಯುರೋಪಿನಲ್ಲಿರುವ ಸುಮಾರು ಇಪ್ಪತ್ತು ಕನ್ನಡ ಸಂಘಗಳು ಮತ್ತು ಕನ್ನಡ-ಕಲಿ ಶಾಲೆಗಳ ಬಗ್ಗೆ ಲೇಖನಗಳು, ಜೊತೆಗೆ ವೈವಿಧ್ಯಮಯ ಆಸಕ್ತಿದಾಯಕ ಲೇಖನಗಳು, ಕವನಗಳು, ಚಿತ್ರಕಲೆ ಇತ್ಯಾದಿಗಳು ಇವೆ ಎಂದು ಪ್ರಧಾನ ಸಂಪಾದಕರಾದ ಬೆಂಕಿ ಬಸಣ್ಣ ತಿಳಿಸಿದ್ದಾರೆ.
"ಮೈನಾಕ" ಎಂಬ ಹೆಸರು ಕೊಡಲು ಕಾರಣವೇನು? ಎಂಬ ಪ್ರಶ್ನೆ ಸಹಜವಾಗಿ ನಿಮ್ಮ ಮನಸ್ಸಿನಲ್ಲಿ ಏಳುತ್ತದೆ. ಮೈನಾಕ ಎಂದಾಕ್ಷಣ ನಮ್ಮ ರಸಿಕ ಮನಸ್ಸಿಗೆ ಬರುವುದು ವಿಶ್ವಾಮಿತ್ರ ಮುನಿಯ ತಪಸ್ಸನ್ನು ಭಂಗ ಮಾಡಿದ ಅಪೂರ್ವ ಸುಂದರಿ, ಅಪ್ಸರೆ 'ಮೇನಕಾ' ! "ಮೈನಾಕ" ಹೆಸರು ( ಮೈ = ಮೈನ್ ನದಿಯ ತೀರದಲ್ಲಿ ಈ ಸಮ್ಮೇಳನ ನಡೆಯಲಿರುವ ಫ್ರಾಂಕ್ಫರ್ಟ್ ನಗರವಿದೆ ಮತ್ತು ರೈನ್ "ಮೈ" ನ್ ಕನ್ನಡ ಸಂಘ, ಫ್ರಾಂಕ್ಫರ್ಟ್ ) + (ನಾ = ನಾವಿಕ) + ( ಕ = ಕನ್ನಡಿಗರು ) ಹೀಗೆ ಮೂರು ಅಕ್ಷರಗಳನ್ನು ಕೂಡಿಸಿ ಸೃಷ್ಟಿಸಲಾಗಿದೆ . ಹಾಗೆಯೇ "ಮೈನಾಕ" ಹೆಸರಿನ ಪರ್ವತವು ರಾಮಾಯಣದಲ್ಲಿ ಉಲ್ಲೇಖವಾಗಿದ್ದು ಅದು ಹನುಮಂತನು ಲಂಕಾಕ್ಕೆ ಹೋಗುವ ಸಮಯದಲ್ಲಿ ಆಶ್ರಯ ಕೊಟ್ಟು ಸಹಾಯ ಮಾಡಿರುತ್ತದೆ.. ಮೈನಾಕ ವನ್ನು ಕಂಗ್ಲಿಷ್ ನಲ್ಲಿ "My-ನಾಕ", ( ಅಂದ್ರೆ "My - ಸ್ವರ್ಗ") ಎಂದು ಬರೆಯಬಹುದು. ಈ ಸ್ಮರಣ ಸಂಚಿಕೆಯ ರಸವತ್ತಾದ ಬರಹಗಳನ್ನು ಸವಿಯುತ್ತಿದ್ದರೆ, ಈ ಭೂಮಿಯ ಮೇಲೆಯೇ "ಸ್ವರ್ಗ" ದಲ್ಲಿದಷ್ಟು ಆನಂದದ ಅನುಭವವಾಗುತ್ತದೆ. "My- ನಾಕ" ( ನನ್ನ ಸ್ವರ್ಗ ) ಇಲ್ಲಿಯೇ ಸೃಷ್ಟಿಯಾದಂತ ಅನುಭವವಾಗುತ್ತದೆ.
ಕನ್ನಡ ಸಾಹಿತ್ಯ ವೇದಿಕೆ :
ಯುರೋಪಿನ ಎಲ್ಲಾ ಕನ್ನಡ ಸಾಹಿತ್ಯಾಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಮೊಟ್ಟಮೊದಲ ಬಾರಿಗೆ ಯುರೋಪಿನ ಕನ್ನಡ ಸಾಹಿತ್ಯ ಲೋಕದ ಅನಾವರಣ ಮಾಡಲಾಯಿತು. ಇದನ್ನು ಮ್ಯೂನಿಕ್ ನಲ್ಲಿರುವ ಸಿರಿಗನ್ನಡ ಕೂಟದ ವಿಶೇಷ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಪ್ರೊ. ಕೃಷ್ಣೇಗೌಡ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಶಿಯವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ವೇದಿಕೆ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ ನಡೆಯಿತು. ಇದರಲ್ಲಿ "ಯುರೋಪಿನಲ್ಲಿ ಕನ್ನಡ ಭಾಷೆ ಅಭಿವೃದ್ಧಿಯ ಮತ್ತು ಕುಂದು ಕೊರತೆಗಳಲ್ಲಿ ಜರ್ಮನಿ ಮತ್ತು ಕರ್ನಾಟಕ ಸರ್ಕಾರದ ಸಹಕಾರದ ಅಗತ್ಯತೆ" ಎಂಬ ವಿಷಯದ ಮೇಲೆ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಜೊತೆಗೆ "ಯುರೋಪಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಮತ್ತು ಪ್ರಾಮುಖ್ಯತೆ" ವಿಷಯ ಮಂಡನೆಯನ್ನು ಏರ್ಪಡಿಸಲಾಗಿತ್ತು.
ಈ ವೇದಿಕೆಯ ನಿರ್ವಹಣೆಯನ್ನು ಕಮಲಾಕ್ಷ, ನಿರೂಪಣೆಯನ್ನು ಡಾಕ್ಟರ್ ನವ್ಯ ದರ್ಶನ್ ಮತ್ತು ಗಿರೀಶ್ ರಾವಂದೂರ್, ಸ್ವಾಗತವನ್ನು ಶೋಭಾ ಚೌಹಾಣ್ ತುಂಬಾ ಸೊಗಸಾಗಿ ಮಾಡಿಕೊಟ್ಟರು.
ಇಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪೂಜಾ, ಸುಮ ಶ್ರೀನಿವಾಸ್, ಸಿಂಚನ ಮೂರ್ತಿ, ಶೋಭಾ ಚೌಹಾಣ್, ಕಮಲಾಕ್ಷ ಮುಂತಾದ ಕವಿಗಳು ತಮ್ಮ ರಸಮಯ ಕವನಗಳನ್ನು ಓದಿ ಪ್ರೇಕ್ಷಕರ ಮನಸೂರೆಗೊಂಡರು.
ಸ್ವಾತಿ ಪ್ರಭು, ವಿಭಾ ಕಟ್ಟಿ ತಮ್ಮ ಮಧುರ ಗಾಯನದಿಂದ ಕೇಳುಗರ ಮನಸ್ಸನ್ನು ಗೆದ್ದರು.
ಮಕ್ಕಳ ಕವನ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಆದಿಶೇಷ ಬಾಯರಿ ಮತ್ತು ಸ್ನಿಗ್ದ ಚೌಹಾಣ್ ಹಾಗೂ ವಯಸ್ಕರ ಕವನ ರಚನಾ ಸ್ಪರ್ಧೆಯಲ್ಲಿ ವಿಚಕರಾದ ಶೋಭಾ ಚೌಹಾಣ್ ಮತ್ತು ವಿನಿತಾ ಅವರನ್ನು ಸನ್ಮಾನಿಸಲಾಯಿತು.
ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಯುರೋಪಿನಲ್ಲಿ ಕನ್ನಡ ಲೋಕಕ್ಕೆ ಅಪಾರ ಕೊಡುಗೆ ನೀಡಿದ ರಾಘವೇಂದ್ರ ಪ್ರಸಾದ ಲಕ್ಷ್ಮಣ್, ರವೀಂದ್ರ ಕುಲ್ಕರ್ಣಿ, ಪ್ರೇಮಲತಾ ಬಸವರಾಜಯ್ಯ, ಉಷಾರಾಣಿ ಕಾಂತಿಮಠ, ಸೌಮ್ಯ ಭಟ್, ಹಾಗೂ ವಿಶ್ವಮಟ್ಟದ "ಥಟ್" ಅಂತ ಹೇಳಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವೈಷ್ಣವಿ ಕುಲಕರ್ಣಿ ಮತ್ತು ಕಾರ್ತಿಕ್ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ತಮ್ಮ ಭಾಷಣಗಳಲ್ಲಿ ಪ್ರೊ. ಕೃಷ್ಣೇಗೌಡ ಮತ್ತು ಡಾ. ಮಹೇಶ್ ಜೋಶಿಯವರು ಕರ್ನಾಟಕದಲ್ಲಿ ಕನ್ನಡ ಭಾಷೆಯು ನಿರ್ಲಕ್ಷವಾಗುತ್ತಿರುವ ಈ ಸಮಯದಲ್ಲಿ, ಬಹು ದೂರದ ಯುರೋಪಿನಲ್ಲಿ ಕನ್ನಡವನ್ನು ಬೆಳೆಸುತ್ತಿರುವ ಅನಿವಾಸಿ ಕನ್ನಡಿಗರ ಶ್ರಮವನ್ನು ಮುಕ್ತ ಕಂಠದಿಂದ ಹೊಗಳಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಕ್ಯಾಲಿಫೋರ್ನಿಯಾದ "ರಂಗಧ್ವನಿ" ತಂಡವು ವಲ್ಲೀಶ ಶಾಸ್ತ್ರಿ ನಿರ್ದೇಶನದ ಸಂದೀಪ್ ಆಚಾರ್ ವಿರಚಿತ ಹಾಸ್ಯ ನಾಟಕ "ಬೇಸ್ತು ಬಿದ್ದ ರಾಜ" ಅನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ರಂಜಿಸಿತು. ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಮತ್ತು ಅವರ ತಂಡದವರು ಮನಮೋಹಕ ಗಾಯನವನ್ನು ಪ್ರಸ್ತುತ ಪಡಿಸಿದರು.
ಬೇಸ್ತು ಬಿದ್ದ ರಾಜ ನಾಟಕದ ಬಗ್ಗೆ :
ಕ್ಯಾಲಿಫೋರ್ನಿಯಾದ "ರಂಗಧ್ವನಿ" ತಂಡ ಪ್ರಸ್ತುತ ಪಡಿಸಿದ ವಲ್ಲೀಶ ಶಾಸ್ತ್ರಿ ನಿರ್ದೇಶನದದ ಸಂದೀಪ್ ಆಚಾರ್ ವಿರಚಿತ ಹಾಸ್ಯ ನಾಟಕ "ಬೇಸ್ತು ಬಿದ್ದ ರಾಜ" ಪ್ರೇಕ್ಷಕ ರನ್ನು ರಂಜಿಸಿತು. ನಾಟಕದ ಮುಖ್ಯ ಪಾತ್ರಧಾರಿಗಳು - ರಾಜನಾಗಿ ವಲ್ಲೀಶ ಶಾಸ್ತ್ರಿ, ಮಂತಿಯಾಗಿ ಅನಂತ ಕೃಷ್ಣ, ರಾಣಿಯಾಗಿ ವೀಣಾ ಅನಂತ್, ಮತ್ತೆ ರಾಜಗುರುಗಳಾಗಿ ಅನಂತ ಪ್ರಸಾದ್. ನಾಟಕ ರಚನೆ ಸಂದೀಪ್ ಆಚಾರ್, ನಾಟಕ Director ವಲ್ಲೀಶ ಶಾಸ್ತ್ರಿ. ಈ ನಾಟಕವನ್ನು ಸಮಯದ ಅಭಾವದಿಂದ ಮೇನ್ ಸ್ಟೇಜ್ ಬದಲಾಗಿ ಪಕ್ಕದ ಬೇರೆ ಕೊಠಡಿಯಲ್ಲಿ ನಡೆಸಲಾಯಿತು . ಈ ನಾಟಕಕ್ಕೆ ಬೇಕಾದ ಎಲ್ಲಾ ವಸ್ತ್ರ , ಉಡುಗೆ, ತೊಡುಗೆ ಮತ್ತು ಸಕಲ ಅಲಂಕಾರಿಕ ವಸ್ತುಗಳನ್ನು ಅಮೆರಿಕದಿಂದ ತಮ್ಮ ಸೂಟಕೇಸ್ ಗಳಲ್ಲಿ ಜರ್ಮನಿಗೆ ತಂಡ ಈ ಹವ್ಯಾಸಿ ನಾಟಕ ತಂಡದ ಶ್ರಮ ನಿಜಕ್ಕೂ ಶ್ಲಾಘನೀಯ.
"ಮೇಧಿನಿ ಸೃಷ್ಟಿ" ಯಕ್ಷಗಾನ:
ಜರ್ಮನಿಯಲ್ಲಿರುವ ಯಕ್ಷಮಿತ್ರರು ತಂಡದವರು ನಡೆಸಿಕೊಟ್ಟ "ಮೇಧಿನಿ ಸೃಷ್ಟಿ" ಯಕ್ಷಗಾನವು ಶ್ವೇತ ವರಾಹ ಕಲ್ಪದ ಆರಂಭದಲ್ಲಿ ಮೇಧಿನಿ ನಿರ್ಮಾಣವಾದ ಸ್ವಾರಸ್ಯಕರ ಪ್ರಸಂಗದ ಬಗ್ಗೆ ಇದ್ದು ಅಮೋಘವಾಗಿ ಮೂಡಿಬಂದಿತು
ಇತರೆ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ನಾವಿಕ ಕಾರ್ಯಕಾರಿಣಿ ಸಮಿತಿಯಿಂದ ಹಚ್ಚೇವು ಕನ್ನಡದ ದೀಪ ನೃತ್ಯ, ಅಮೇರಿಕಾದ ಟೆಕ್ಸಾಸ್ ನ ರಶ್ಮಿ ಶಶಿ ಸ್ಟುಡಿಯೋ ಮುದ್ರಾ ಸ್ಕೂಲ್ ಆಫ್ ಡಾನ್ಸ್ ತಂಡದಿಂದ ನೃತ್ಯ ಕಾರ್ಯಕ್ರಮ, ಅಮೆರಿಕಾದ ವೀರ ರಘುನಾಥ್, ಕಲ್ಪನಾ ರಾಮಸ್ವಾಮಿ, ಶಂಕರಮೂರ್ತಿ, ಮತ್ತು ಗಂಗಾ ಅವರಿಂದ ಗಾನಸುದೆ ಕಾರ್ಯಕ್ರಮ, ಜರ್ಮನಿಯಲ್ಲಿರುವ ಯಕ್ಷಮಿತ್ರರು ತಂಡದಿಂದ "ಮೇಧಿನಿ ಸೃಷ್ಟಿ" ಯಕ್ಷಗಾನ, ಮಯೂರಿಸ್ ಮತ್ತು ಲಯ ತಂಡಗಳಿಂದ ನವನೀತ ನಾಟ್ಯ ಪ್ರದರ್ಶನ, "ವಿದೇಶದಲ್ಲಿ ದೇಶೀಯ ಸೊಗಡು" ತಂಡದಿಂದ ಕನ್ನಡ ನಾಡಿನ ವಿವಿಧ ಉಡುಪು ಮತ್ತು ತೊಡುಗೆಗಳ ಪ್ರಸ್ತುತಿ, ಸೌರಭ ಆರ್ಟ್ಸ್ ಮತ್ತು ಆರೋಹಣಂ ತಂಡಗಳಿಂದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ವೈಭವ, ಜರ್ಮನಿಯ ಬಾಲ ನಾಗರಾಜ್ ಅವರ ತಂಡದಿಂದ ಭಾವಗೀತೆಗಳು, ಬೆಂಗಳೂರಿನಿಂದ ಆಗಮಿಸಿದ್ದ ಖ್ಯಾತ ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತ ಕಲಾವಿದರಾದ ವಿದ್ವಾನ್ ಸದಾಶಿವ್ ಭಟ್ ಮತ್ತು ಅವರ ಪತ್ನಿ ಶ್ರೀಮತಿ ಸಿಂಚನಾ ಮೂರ್ತಿಯವರಿಂದ ಭಕ್ತಿ-ಭಾವ ಸಂಗೀತ ಕಾರ್ಯಕ್ರಮ
ವೈದ್ಯಕೀಯ ಫೋರಮ್ Continuing Medical Education (CME) Forum:
ಅಮೇರಿಕಾದಲ್ಲಿ ವೈದ್ಯ ವೃತ್ತಿಯಲ್ಲಿರುವವರು ನಿರಂತರವಾಗಿ ಅಧ್ಯಯನವನ್ನು ಮುಂದುವರಿಸಬೇಕಾಗಿರುತ್ತದೆ. ಪ್ರತಿ ವರ್ಷ ನಿಗದಿತ ಶೈಕ್ಷಣಿಕ ಅಗತ್ಯತೆಗಳನ್ನು ಪ್ರತ್ಯಕ್ಷವಾಗಿ ಅಥವಾ ಅಂತರ್ಜಾಲದ ಮೂಲಕ ಪೂರೈಸಬಹುದು. ಈ ನಾವಿಕೋತ್ಸವ 2024 ಸಮಾರಂಭದಲ್ಲಿ ಭಾಗವಹಿಸುತ್ತಿರುವ ವೈದ್ಯರು 2 ಘಂಟೆಗಳ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇದರಲ್ಲಿ ಯೂರೋಪಿನ ಮತ್ತು ಅಮೇರಿಕಾದ ವೈದ್ಯರು ಭಾಗವಹಿಸಿದ್ದರು. ವೈದ್ಯಕೀಯ ಪ್ರಗತಿಗಳು ಮತ್ತು ಪ್ರಮುಖ ವೈದ್ಯಕೀಯ ವಿಷಯಗಳ ಕುರಿತು ಉನ್ನತ ಮಟ್ಟದ ಚರ್ಚೆಗಳು ನಡೆದವು ಮತ್ತು ಆಲೋಚನೆಗಳ ವಿನಿಮಯ ಆಯಿತು ಮತ್ತು ಎಲ್ಲಾ ವೈದ್ಯರು Continuing Medical Education (CME) ಕ್ರೆಡಿಟ್‌ಗಳನ್ನು ಪಡೆದರು.
ಡಾ. ಚಂದ್ರಮೌಳಿ ಸಿಂಕೋಪ್ ಮೌಲ್ಯಮಾಪನ ಮತ್ತು ನಿರ್ವಹಣೆ ವಿಷಯದ ಬಗ್ಗೆ, ಡಾ. ರಾಜಣ್ಣ ರಾಮಸ್ವಾಮಿ ನಿದ್ರೆಯಲ್ಲಿ ಉಸಿರು ಕಟ್ಟುವಿಕೆ ಬಗ್ಗೆ , ಡಾ. ಸುಬ್ರಹ್ಮಣ್ಯ ಭಟ್ ನಿಮ್ಮ ವೈದ್ಯಕೀಯ ಪರವಾನಗಿಯನ್ನು ಹೇಗೆ ರಕ್ಷಿಸುವುದು ಎಂಬ ಬಗ್ಗೆ, ಡಾ. ನವೀನ್ ಉಲಿ ಮಧುಮೇಹವನ್ನು ನಿರ್ವಹಿಸುವಲ್ಲಿ ಮಾದರಿ ಬದಲಾವಣೆಗಳು, ಡಾ. ಮನಮೋಹನ್ ಕಟಪಾಡಿ ಯುವ ಅಕಾಲಿಕ ಅಕಾಲಿಕ ಮರಣ ಮತ್ತು ತಡೆಗಟ್ಟಬಹುದಾದ ಸಾವಿನ ಕುರಿತು ಉಪನ್ಯಾಸ ನೀಡಿದರು. ನಂತರ ವೈದ್ಯಕೀಯ ಪ್ಯಾನೆಲ್ ಚರ್ಚೆ ಮತ್ತು ಪ್ರಶ್ನೋತ್ತರ ನಡೆಯಿತು.
More pictures of this event are available at the below link
https://photos.app.goo.gl/5oa6iEuwW919QWKC6
Instagram
https://www.instagram.com/rmksgermany/