20/05/2024
ಜನಪದ ಸೇವಾ ಟ್ರಸ್ಟಿನ ಜೀವನ ಶಾಲೆಗೆ ಈ ವರ್ಷ ಇನ್ನೊಂದಿಷ್ಟು ಯುವಕರನ್ನು ಸೇರಿಸಿ ಕೊಳ್ಳಲು ಅವಕಾಶವಿದೆ.
ಜೀವನ ಶಾಲೆ ಯಾರಿಗೆ :
ಔಪಚಾರಿಕ ಶಿಕ್ಷಣದಲ್ಲಿ ಆಸಕ್ತಿ ಇರದ, ಅದನ್ನು ಧಿಕ್ಕರಿಸುತ್ತಿರುವ, ನಗರಗಳಿಂದ ದೂರವಿದ್ದು ಸರಳ ಶ್ರಮಾಧಾರಿತ ಬದುಕನ್ನು ಕಟ್ಟಿಕೊಳ್ಳುವ ಕನಸುಳ್ಳ ಯುವಕರಿಗೆ ಈ ಶಾಲೆ ನೆರವಾಗುವುದು.
ಹಿನ್ನೆಲೆ:
ಔಪಚಾರಿಕ ಶಿಕ್ಷಣದ ಇತಿ ಮಿತಿಗಳು ನಿಧಾನವಾಗಿ ಜನ ಸಾಮಾನ್ಯರ ಅರಿವಿಗೂ ಬರುತ್ತಿರುವುದು ಸಂತಸದ ವಿಷಯ. ಉಳ್ಳವರಿಂದ, ಉಳ್ಳವರಿಗಾಗಿ, ಉಳ್ಳವರು ನಡೆಸುತ್ತಿರುವ ವ್ಯವಸ್ಥೆಯಾಗಿದೆ ಆಧುನಿಕ ಶಿಕ್ಷಣ. ಅದರಿಂದ ವಂಚಿತರಾದರೆ ಬದುಕೇ ಇಲ್ಲ ಎಂಬಂತಹ ತಪ್ಪು ಗ್ರಹಿಕೆಯಲ್ಲಿ ಜನರು ಬಿದ್ದು ಒದ್ದಾಡುವಂತೆ ಮಾಡುತ್ತಿದೆ. ಅದು ತೋರುವ ಮರೀಚಿಕೆಯ ಹಿಂದೆ ಎಲ್ಲರೂ ಓಡುವಂತೆ ಮಾಡುತ್ತಿದೆ. ಆದರೆ ಒಮ್ಮೆ ಆಧುನಿಕ ಶಿಕ್ಷಣ ಒಡ್ಡಿರುವ ಸ್ಪರ್ಧೆಯ ಕಣದಿಂದ ಹೊರಗುಳಿಯಲು ನಿರ್ಧರಿಸಿದರೆ ನಿಜವಾದ , ವಾಸ್ತವ ಪ್ರಪಂಚದ ದರ್ಶನವಾಗುತ್ತದೆ. ಬದುಕು ಕಟ್ಟಿಕೊಳ್ಳಲು ಇರುವ ಹೇರಳ ಅವಕಾಶಗಳು ಕಾಣತೊಡಗುತ್ತವೆ. ಅಂತಹ ಸಾಧ್ಯತೆಗಳನ್ನು ಪರಿಚಯಿಸುವುದೇ ಜೀವನ ಶಾಲೆಯ ಉದ್ದೇಶವಾಗಿದೆ.
ಏನನ್ನು ಕಲಿಸಲಾಗುವುದು?
ಇಂದು ಹೆಚ್ಚಿನ ಯುವಕರನ್ನು ಕೀಳರಿಮೆ ಆವರಿಸಿ ಕೊಂಡು ಬಿಟ್ಟಿದೆ. ತಮ್ಮ ಮನದಲ್ಲಿ ಇರುವುದನ್ನು ಹೇಳಲಾಗದ ಮತ್ತು ಅದನ್ನು ಸಾಧಿಸಲಾಗದ ಮನೋ ವೇದನೆಯನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಬದುಕಿನ ಬಗ್ಗೆ ತಪ್ಪು ತಿಳಿವಳಿಕೆಯನ್ನು ಮತ್ತು ತಪ್ಪು ಮೌಲ್ಯಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳು, ಕುಟುಂಬದ ವಾತಾವರಣ, ಶಾಲೆ ಕಾಲೇಜುಗಳು, ಗೆಳೆಯರು ಎಲ್ಲರೂ ಕಾರಣರಾಗುತ್ತಿದ್ದಾರೆ.
ಜೀವನ ಶಾಲೆ ಅವರ ಕೀಳರಿಮೆಯನ್ನು ಕಡಿಮೆ ಮಾಡುವ ರುಜು ಮೌಲ್ಯಗಳನ್ನು ನೀಡುವ ಕೆಲಸ ಮಾಡುತ್ತದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ಹೊಂದಿರುವ ಶಾಪಗಳಿಂದ ಅವರನ್ನು ಮುಕ್ತರನ್ನಾಗಿ ಮಾಡಿ ಅವರು ’ನಿರಂಕುಶಮತಿ’ ಗಳಾಗಲು ಎಲ್ಲ ಸಹಕಾರ ನೀಡುತ್ತದೆ.
ತರಬೇತಿಯ ಅಂತ್ಯದ ಹೊತ್ತಿಗೆ ವಿದ್ಯಾರ್ಥಿಯು ಆತ್ಮ ಸ್ಥೈರ್ಯವುಳ್ಳ, ಹಿಡಿದ ಕೆಲಸವನ್ನು ಪ್ರೀತಿಯಿಂದ ದಕ್ಷತೆಯಿಂದ ಮಾಡುವ, ಪ್ರಾಮಾಣಿಕನಾಗಿರುವ, ಒಬ್ಬ ಸಮರ್ಥ ವ್ಯಕ್ತಿಯಾಗಿ ರೂಪುಗೊಂಡಿರುತ್ತಾನೆ. ಸಮಾಜಕ್ಕೆ ಭಾರವಾಗದೇ, ಹೆಮ್ಮೆ ಪಡುವ ಯುವಕನಾಗಿರುತ್ತಾನೆ.
ನಿಮ್ಮ ಸಂಪರ್ಕದಲ್ಲಿ ಈ ಶಾಲೆಗೆ ಸೂಕ್ತವಾದ ಯುವಕರಿದ್ದರೆ ಅವರಿಗೆ ತಿಳಿಸಿ.
ಸಂಪರ್ಕ ಸಂಖ್ಯೆ; ೯೬೬೩೪೩ ೦೬೩೬೬ ; ೯೮೮೦೫ ೮೦೩೧೨ ; ೮೦೭೩೮ ೪೦೮೦೭