23/07/2026
ಭಾರತೀಯ ಸಮಾಜದಲ್ಲಿ 'ಚಿನ್ನ' ಕೇವಲ ಒಂದು ಲೋಹವಲ್ಲ, ಅದು ಕುಟುಂಬಗಳ ಆರ್ಥಿಕ ಭದ್ರತೆಯ, ಸಂಸ್ಕೃತಿಯ ಮತ್ತು ಭಾವನೆಗಳ ಸಂಕೇತವಾಗಿದೆ. ಮಗಳ ಮದುವೆ, ಆರೋಗ್ಯದ ತುರ್ತು ಪರಿಸ್ಥಿತಿ, ಮಕ್ಕಳ ಉನ್ನತ ಶಿಕ್ಷಣದಂತಹ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರಿಗೆ ನೆರವಾಗುವುದೇ ಅವರು ಕೂಡಿಟ್ಟ ಈ ಚಿನ್ನ. ಇಂತಹ ಸೂಕ್ಷ್ಮ ಭಾವನೆಗಳ ಮೇಲೆ ಚಿನ್ನತಂಬಿ ಮತ್ತು ಆತನ ಪೊಲೀಸ್ ಬೆಂಬಲಿಗರು ಪ್ರಹಾರ ಮಾಡಿದ್ದಾರೆ. ಅಡವಿಟ್ಟ ಚಿನ್ನಕ್ಕೆ ಹೆಚ್ಚಿನ ಬೆಲೆ ನೀಡುವುದಾಗಿ ನಂಬಿಸಿ, ನೂರಾರು ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಕರಗಿಸಿ ಕೋಟ್ಯಾಂತರ ರೂಪಾಯಿ ದೋಚಿರುವ ಈ ಕೃತ್ಯವು, ನೂರಾರು ಕುಟುಂಬಗಳನ್ನು ಬೀದಿಗೆ ತಂದಿದೆ.
ತಮ್ಮ ಜೀವಮಾನದ ದುಡಿಮೆಯನ್ನೆಲ್ಲಾ ಕಳೆದುಕೊಂಡಿರುವ ಸಂತ್ರಸ್ತರು ಇಂದು ಕಣ್ಣೀರು ಹಾಕುತ್ತಿದ್ದಾರೆ. ವಂಚಕನಿಂದ ನ್ಯಾಯ ಪಡೆಯಲು ಪೊಲೀಸ್ ಠಾಣೆಯ ಮೆಟ್ಟಿಲೇರಿದರೆ, ಅಲ್ಲಿನ ಭ್ರಷ್ಟ ವ್ಯವಸ್ಥೆ ಅವರನ್ನು ಮತ್ತಷ್ಟು ಹತಾಶೆಗೆ ದೂಡಿದೆ. ಈ ರೀತಿಯ ವ್ಯವಸ್ಥಿತ ಆರ್ಥಿಕ ಲೂಟಿಯು ಸಮಾಜದಲ್ಲಿ ಸರ್ಕಾರದ ಮತ್ತು ಕಾನೂನು ಸುವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಬುಡಮೇಲು ಮಾಡುತ್ತದೆ. ಅಪರಾಧಿಗಳು ಕಾನೂನಿನ ಕುಣಿಕೆಯಿಂದ ಸುಲಭವಾಗಿ ನುಣುಚಿಕೊಳ್ಳುವಂತಾದರೆ, ಅದು ಭವಿಷ್ಯದಲ್ಲಿ ಇಂತಹ ನೂರಾರು ವಂಚಕರು ಹುಟ್ಟಿಕೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ.
ಸ್ಥಳೀಯ ಪೊಲೀಸರು (CCB) ಈ ಪ್ರಕರಣವನ್ನು ಯಾವುದೇ ಕಾರಣಕ್ಕೂ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಿಲ್ಲ. ದೂರುದಾರರ ಅರ್ಜಿಗಳನ್ನು ತಿರುಚಿರುವ ಸಿಸಿಬಿ ಪೊಲೀಸರ ನಡೆಯೇ ಇದಕ್ಕೆ ಜ್ವಲಂತ ಸಾಕ್ಷಿ. ಆದ್ದರಿಂದ, ತಾವು ತಕ್ಷಣವೇ BUDS Act, 2019 ರ ಸೆಕ್ಷನ್ 30 ರ ಅಡಿಯಲ್ಲಿ ತಮಗಿರುವ ಅಧಿಕಾರವನ್ನು ಬಳಸಿ, ಈ ಹಗರಣವನ್ನು ಕೇಂದ್ರೀಯ ತನಿಖಾ ದಳ (CBI) ಗೆ ಹಸ್ತಾಂತರಿಸಲು ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ಶಿಫಾರಸು ಮಾಡಬೇಕು.
KPID ಕಾಯ್ದೆ 2004 ಮತ್ತು BUDS ಕಾಯ್ದೆ 2019 ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರವನ್ನು ತಕ್ಷಣವೇ ಕಾರ್ಯಪ್ರವೃತ್ತಗೊಳಿಸಿ, ಆರೋಪಿ ಚಿನ್ನತಂಬಿ ಮತ್ತು ಆತನ ಬೆಂಬಲಿಗರು ಬೇನಾಮಿ ಹೆಸರಿನಲ್ಲಿ ಮಾಡಿರುವ ಎಲ್ಲಾ ಸ್ಥಿರ ಮತ್ತು ಚರಾಸ್ತಿಗಳನ್ನು, ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು. ವಶಪಡಿಸಿಕೊಂಡ ಆಸ್ತಿಗಳನ್ನು 60 ದಿನಗಳ ಮಿತಿಯೊಳಗೆ ನಿಯೋಜಿತ ನ್ಯಾಯಾಲಯದ (Designated Court) ಅನುಮತಿ ಪಡೆದು ಶೀಘ್ರವಾಗಿ ಹರಾಜು ಹಾಕಿ, ನೊಂದ ಠೇವಣಿದಾರರಿಗೆ ಮತ್ತು ಗ್ರಾಹಕರಿಗೆ ಅವರ ಹಣ ಅಥವಾ ಚಿನ್ನದ ಮೌಲ್ಯವನ್ನು ಹಿಂದಿರುಗಿಸುವ ಪ್ರಕ್ರಿಯೆಯನ್ನು ಸಮರೊಪಾದಿಯಲ್ಲಿ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದೆ .
ದಯವಿಟ್ಟು ಎಲ್ಲಾ ಪ್ರಜ್ಞಾವಂತ ಮೈಸೂರಿನ ನಾಗರಿಕರು ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಸ್ಥಳ,=ಜಿಲ್ಲಾಧಿಕಾರಿ ಕಚೇರಿ ಅವಾರಣ
ದಿನಾಂಕ: 23-07-2026
#ಮೈಸೂರು