21/02/2026
ಕೆರೆಗಳ 'ಶವಸಂಸ್ಕಾರ'
ನಮ್ಮ ನಾಡಿನ ಕೆರೆಗಳು ಕೇವಲ ನೀರಿನ ಮೂಲಗಳಲ್ಲ, ಅವು ಈ ಭೂಮಿಯ ಜೀವನಾಡಿಗಳು. ಆದರೆ ಇಂದು ಕೆರೆ ಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಹಸನಗಳನ್ನು ನೋಡಿದರೆ, ನಮ್ಮ ಸಮಾಜದ ದ್ವಂದ್ವ ನಿಲುವು ಮತ್ತು ವ್ಯವಸ್ಥೆಯ ಕುತಂತ್ರ ಅಸಹ್ಯ ಹುಟ್ಟಿಸುವಂತಿದೆ. ಬಫರ್ ಜೋನ್ (Buffer Zone) ವಿಸ್ತೀರ್ಣ ಕಡಿಮೆ ಮಾಡಿದಾಗ ಪರಿಸರ ಪ್ರೇಮದ ದೊಡ್ಡ ಮಾತುಗಳನ್ನಾಡಿ, ಮೊಸಳೆ ಕಣ್ಣೀರು ಸುರಿಸುವ ಅದೇ ಜನತೆ, ಕೆರೆಯ ಒತ್ತುವರಿಯನ್ನು ಮರೆಮಾಚಿ ನಡೆಯುವ 'ಸೌಂದರ್ಯೀಕರಣ'ದ ಹೆಸರಿನ ಲೂಟಿಗೆ ಮೌನವಾಗಿ ಬೆಂಬಲ ನೀಡುತ್ತಿರುವುದು ಕಾಲದ ವ್ಯಂಗ್ಯ.
ಒಂದು ಕೆರೆಯ ನಿಜವಾದ ಪುನರುಜ್ಜೀವನ ಎಂದರೆ ಮೊದಲು ಆಗಬೇಕಿರುವುದು ವೈಜ್ಞಾನಿಕ ಸರ್ವೇ ಮತ್ತು ಒತ್ತುವರಿ ತೆರವು. ಆದರೆ ಇಂದು ಕೆರೆಯ ಜಾಗವನ್ನು ಕಬಳಿಸಿದ ಪ್ರಭಾವಿಗಳನ್ನು ಮುಟ್ಟುವ ಧೈರ್ಯ ತೋರದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಅತಿಕ್ರಮಣವಾದ ಜಾಗವನ್ನು ಹಾಗೆಯೇ ಉಳಿಸಿಕೊಂಡು, ಉಳಿದ ಅಲ್ಪ ಜಾಗದಲ್ಲಿ ಪಾರ್ಕ್ ಮಾಡುವುದು, ವಾಕಿಂಗ್ ಪಾತ್ ನಿರ್ಮಿಸುವುದನ್ನೇ 'ಮಾದರಿ ಅಭಿವೃದ್ಧಿ' ಎಂದು ಬಿಂಬಿಸುತ್ತಿದ್ದಾರೆ. ಇದು ಕೆರೆಯನ್ನು ಬದುಕಿಸುವ ಪ್ರಯತ್ನವಲ್ಲ, ಬದಲಿಗೆ ಒತ್ತುವರಿದಾರರಿಗೆ ರಕ್ಷಣೆ ನೀಡಿ ಕೆರೆಯ ಅಸ್ತಿತ್ವವನ್ನೇ ಮುಗಿಸುವ ವ್ಯವಸ್ಥಿತ ಸಂಚು. ಈ ಇಡೀ ನಾಟಕಕ್ಕೆ ಸಾಥ್ ನೀಡುತ್ತಿರುವುದು ಇಂದು ಹಾದಿಬೀದಿಯಲ್ಲಿ ಹುಟ್ಟಿಕೊಂಡಿರುವ 'ಸೋ ಕಾಲ್ಡ್' ಪರಿಸರವಾದಿ NGOಗಳು. ಕಾರ್ಪೊರೇಟ್ ಕಂಪನಿಗಳ CSR (Corporate Social Responsibility) ಹಣದ ಮೇಲೆ ಕಣ್ಣಿಟ್ಟಿರುವ ಈ ಸಂಸ್ಥೆಗಳು, ಪರಿಸರ ಪ್ರೇಮದ ಮುಖವಾಡ ಧರಿಸಿದ ಶುದ್ಧ ಬ್ಯುಸಿನೆಸ್ ಮ್ಯಾನ್‌ಗಳು. ಇವರಿಗೆ ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯಕ್ಕಿಂತ ಹೆಚ್ಚಾಗಿ, ಸಿಮೆಂಟ್ ಕಾಂಕ್ರೀಟ್ ಕಾಮಗಾರಿಗಳಲ್ಲೇ ಹೆಚ್ಚು ಆಸಕ್ತಿ.
ಯಾವುದೇ ಕೆರೆಯ ಅಭಿವೃದ್ಧಿ ಕಾಮಗಾರಿ ಕೆಟಿಸಿಡಿಎ (KTCDA) ಮತ್ತು EMPRI ಸಿದ್ಧಪಡಿಸಿದ ಯೋಜನಾ ವರದಿ (DPR) ಅನ್ವಯವೇ ನಡೆಯಬೇಕು ಎಂಬ ಕಾನೂನಿದೆ. ಆದರೆ ಈ ಧನಪಿಶಾಚಿಗಳು ಮತ್ತು ತಾಂತ್ರಿಕ ಸಲಹೆಗಾರರು ಸೇರಿಕೊಂಡು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇವರಿಗೆ ಬೇಕಿರುವುದು ಕಮಿಷನ್ ಮಾತ್ರವೇ ಹೊರತು ಕೆರೆಯ ಭವಿಷ್ಯವಲ್ಲ.
ಕೆರೆಯ ಸಂಗ್ರಹದ ಮಟ್ಟವನ್ನು (Storage Level) ನಿರ್ಲಕ್ಷಿಸಿ, ಕೇವಲ ಮೇಲ್ಪದರದ ಬಣ್ಣ-ಬಳಿತಕ್ಕೆ ಕೋಟಿಗಟ್ಟಲೆ ಸಾರ್ವಜನಿಕ ಮತ್ತು CSR ಹಣ ವ್ಯಯಿಸುವುದು ಅಕ್ಷಮ್ಯ ಅಪರಾಧ.
ಕೆರೆಯ ಸುತ್ತ ಒಂದಿಷ್ಟು ಹಸಿರು ಕಾಣಿಸಿದರೆ ಸಾಕು ಎಂದು ಸಂಭ್ರಮಿಸುವ ನಾಗರಿಕರೇ, ಒಮ್ಮೆ ಕಣ್ಣು ಬಿಟ್ಟು ನೋಡಿ:
ಕೆರೆಯ ರಾಜಕಾಲುವೆಗಳು ಒತ್ತುವರಿಯಾಗಿ ಮುಚ್ಚಿಹೋಗಿದ್ದರೂ ನೀವು ಸುಮ್ಮನಿರುವುದೇಕೆ?
ಕೆರೆಯ ಗಡಿ ಗುರುತಿಸದೆ ಪಕ್ಕದ ಬಹುಮಹಡಿ ಕಟ್ಟಡಗಳಿಗೆ ಪೂರಕವಾಗಿ ಕಾಮಗಾರಿ ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತಿಲ್ಲವೇ?
ಶಾಸ್ತ್ರೋಕ್ತವಾಗಿ ಅಭಿವೃದ್ಧಿಯಾಗದ ಈ ಕೆರೆ, ಮುಂದಿನ ಮಳೆಗೆ ತುಂಬಿ ನಿಮ್ಮ ಮನೆಗಳಿಗೆ ನೀರು ನುಗ್ಗಿಸಿದಾಗ ಮಾತ್ರ ನಿಮಗೆ ಜ್ಞಾನೋದಯವಾಗುವುದೇ?
ಕೆರೆಗಳ ಪುನರುಜ್ಜೀವನದ ಹೆಸರಿನಲ್ಲಿ ನಡೆಯುತ್ತಿರುವ ಈ ಹಣದ ವ್ಯರ್ಥ ಪ್ರದರ್ಶನ ಇಂದೇ ನಿಲ್ಲಬೇಕು. ಕೆರೆಯ ಅಸ್ತಿತ್ವವನ್ನು ಬಲಿ ಕೊಟ್ಟು, ಒತ್ತುವರಿದಾರರ ಮತ್ತು NGO ಮುಖವಾಡದ ಉದ್ಯಮಿಗಳ ಹಿತ ಕಾಯುವ ಇಂತಹ ಯೋಜನೆಗಳಿಗೆ ಸಾರ್ವಜನಿಕರು ಬೆಂಬಲ ನೀಡಬಾರದು. ಮೊದಲು ಕೆರೆಯ ಗಡಿ ಗುರುತಿಸಿ, ಒತ್ತುವರಿ ತೆರವುಗೊಳಿಸಿ, ನಂತರವಷ್ಟೇ ಅಭಿವೃದ್ಧಿಯ ಮಾತಾಡಿ. ಇಲ್ಲದಿದ್ದರೆ, ನಾವು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಸಮೃದ್ಧ ಕೆರೆಗಳನ್ನಲ್ಲ, ಬದಲಿಗೆ ಕಾಂಕ್ರೀಟ್‌ನಿಂದ ಮುಚ್ಚಿ ಹೋದ ಸಮಾಧಿಯನ್ನು.