02/09/2026
ಬೆಂಗಳೂರಿನ ಪ್ರಾಚೀನ ವೀರರು: ಭಾಗ 11 - ಕೆಂಪಣ್ಣ
ಕೆಂಪಣ್ಣ ಬೆಂಗಳೂರಿನ ಒಬ್ಬ ಐತಿಹಾಸಿಕ ವೀರನಾಗಿದ್ದು, ಈತನ ಸಾಹಸಗಾಥೆಯು 'ಗುಲಕಮಲೆ' ಗ್ರಾಮದಲ್ಲಿರುವ 14ನೇ ಶತಮಾನದ ಒಂದು ವೀರಗಲ್ಲು ಶಾಸನದಲ್ಲಿ ದಾಖಲಾಗಿದೆ. ಇದು ಬೆಂಗಳೂರಿನ ಇತಿಹಾಸಕ್ಕೆ ಒಂದು ಪ್ರಮುಖ ಆಧಾರವಾಗಿದ್ದು, ಇದರಲ್ಲಿ ಗುಲಕಮಲೆ ಗ್ರಾಮವನ್ನು 'ಗುಲಕಮರಿ' ಎಂದು ಕರೆಯಲಾಗಿದೆ.
ಈ ವೀರಗಲ್ಲು, ಸಂತನ ಮಗನಾದ 'ಕೆಂಪಣ್ಣನು' ಗುಲಕಮಲೆಯಲ್ಲಿ ನಡೆದ ಒಂದು ಕಾಳಗದಲ್ಲಿ ತನ್ನ ಪ್ರಾಣವನ್ನೂ ಲೆಕ್ಕಿಸದೇ, ವೀರಾವೇಷದಿಂದ ಹೋರಾಡಿ ಮಡಿದಾಗ, ಈತನ ಅಣ್ಣನಾದ ಕರಿಯಪ್ಪನು ಈ ವೀರಗಲ್ಲನ್ನು ನಿಲ್ಲಿಸಿದನು ಎಂಬ ಮಾಹಿತಿಯನ್ನು ತಿಳಿಸುತ್ತದೆ. ಈ ವೀರಗಲ್ಲಿನಲ್ಲಿ ಕನ್ನೆಯನಾಯ್ಕ ಎಂಬ ವ್ಯಕ್ತಿ ಹಾಗೂ ಕಿತಿನೆಲೆ ಎಂಬ ಸ್ಥಳದ ಹೆಸರು ಸಹ ಉಲ್ಲೇಖವಾಗಿರುತ್ತದೆ. ಆದರೆ ಶಾಸನ ಕಲ್ಲು ಅಲ್ಲಲ್ಲಿ ಸವೆತಕ್ಕೆ ಒಳಗಾಗಿರುವುದರಿಂದ ಈ ವ್ಯಕ್ತಿ ಹಾಗೂ ಊರಿನ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿದುಬರುವುದಿಲ್ಲ.
ಗಮನಿಸಬೇಕಾದ ಸಂಗತಿಯೇನೆಂದರೆ, ಈ ವೀರಗಲ್ಲು ಕೇವಲ ಒಂದು ಕಾಳಗದಲ್ಲಿ ಮಡಿದ ವೀರನನ್ನು ಮಾತ್ರ ಗೌರವಿಸುವುದಿಲ್ಲ, ಜೊತೆಗೆ ಆ ವೀರನ ಪತ್ನಿಯ ಅಸಾಧಾರಣ ತ್ಯಾಗವನ್ನೂ ಸ್ಮರಿಸುತ್ತದೆ. ಈ ವೀರಗಲ್ಲಿನ ಮೇಲೆ ಬಲಗೈಯಲ್ಲಿ ನಿಂಬೆಹಣ್ಣು ಹಾಗೂ ಎಡಗೈಯಲ್ಲಿ ಕನ್ನಡಿಯನ್ನು ಹಿಡಿದು ಅಲಂಕಾರ ಭೂಷಿತಳಾಗಿ ನಿಂತಿರುವ ಒಬ್ಬ ಮಹಿಳೆಯ ಶಿಲ್ಪವನ್ನೂ ಕೆತ್ತಲಾಗಿದ್ದು, ಈಕೆ ಬೇರ್ಯಾರು ಅಲ್ಲ ಕೆಂಪಣ್ಣನ ಪತ್ನಿ. ತನ್ನ ಪತಿಯ ಮರಣದ ನಂತರ ಈಕೆಯೂ ಸಹ ಸ್ವಇಚ್ಛೆಯಿಂದ ತನ್ನ ಪ್ರಾಣವನ್ನು ತ್ಯಾಗ ಮಾಡುವ ನಿರ್ಧಾರ ಕೈಗೊಂಡಳು. ಆ ಸಂದರ್ಭದಲ್ಲಿ ಅಂದಿನ ಸಮಾಜವೂ ಸಹ ಸಾವಿನ ನಿರ್ಧಾರ ಕೈಬಿಡುವಂತೆ ಆಕೆಯ ಮನವೊಲಿಸುವ ಪ್ರಯತ್ನ ಮಾಡಿತು. ಆದರೆ ಆಕೆಯು ತನ್ನ ನಿರ್ಧಾರವನ್ನು ಬದಲಿಸದೇ ಅಂತಿಮವಾಗಿ ಸಾವನ್ನು ಆಯ್ಕೆ ಮಾಡಿಕೊಂಡಳು. ಇದೊಂದು ಅಸಾಧಾರಣ ಮಾನಸಿಕ ಸ್ಥೈರ್ಯವನ್ನು ಒಳಗೊಂಡ ಘಟನೆಯಾಗಿದ್ದು, ಈಕೆಯ ವೀರ ಮರಣವನ್ನೂ ಸ್ಮರಿಸುವ ಉದ್ದೇಶದಿಂದ ಮಹಿಳೆಯ ಶಿಲ್ಪವನ್ನು ಸಹ ಕಲ್ಲಿನ ಮೇಲೆ ಕೆತ್ತಲಾಗಿದೆ. ಈ ವೀರಗಲ್ಲಿನಲ್ಲಿ ಹೋರಾಟದ ಚಿತ್ರಣ ಹಾಗೂ ಮಹಿಳೆಯ ಶಿಲ್ಪ ಎರಡನ್ನೂ ಕೆತ್ತಿರುವುದರಿಂದ ಈ ಸ್ಮಾರಕ ಕಲ್ಲನ್ನು ವೀರಮಾಸ್ತಿ ಕಲ್ಲು ಎಂದು ಕರೆಯಲಾಗುತ್ತದೆ.
ಈ ಪೋಸ್ಟ್‌ನೊಂದಿಗೆ ಗುಲಕಮಲೆಯ ವೀರಗಲ್ಲು ಶಾಸನದ 3ಡಿ ಡಿಜಿಟಲ್ ಚಿತ್ರಗಳನ್ನು ಹಂಚಿಕೊಂಡಿದ್ದು, ಇವುಗಳಲ್ಲಿ 'ಕೆಂಪಣ್ಣ' ಎಂಬ ಹೆಸರು ಕೆತ್ತಿರುವುದನ್ನು ನೀವು ಸ್ಪಷ್ಟವಾಗಿ ಗುರುತಿಸಬಹುದು ಹಾಗೂ ಈ ಕಲ್ಲು 'ಗುಲಕಮಲೆಯ' ಸುಮಾರು 700 ವರ್ಷಗಳ ಇತಿಹಾಸಕ್ಕೆ ಪ್ರಮುಖ ಆಧಾರವಾಗಿರುವುದರಿಂದ, ಮುಂದಿನ ಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ಇದನ್ನು 3ಡಿ ಸ್ಕ್ಯಾನಿಂಗ್ ಮೂಲಕ ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲಾಗಿದೆ.
📍 ವೀರಗಲ್ಲು ಇರುವ ಪ್ರಸ್ತುತ ಸ್ಥಳದ ಗೂಗಲ್ ಮ್ಯಾಪ್ ಲಿಂಕ್ಸ್: https://maps.app.goo.gl/xDc4r1DzyooeJUc46
ಚಿತ್ರಕೃಪೆ: ದಿ ಮಿಥಿಕ್ ಸೊಸೈಟಿ – ಬೆಂಗಳೂರು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣಾ ಯೋಜನಾ ತಂಡ.