26/03/2026
#ಸಾವಿರಾರು_ನದಿಗಳು
#ದೇವನಹಳ್ಳಿರೈತಹೋರಾಟದಕಥನಗಳು
ಸಾವಿರಾರು ನದಿಗಳು - ಸಂಪಾದನೆ: ಕಾರಳ್ಳಿ ಶ್ರೀನಿವಾಸ್, ರಮೇಶ್ ಚೀಮಾಚನಹಳ್ಳಿ, ಚಂದ್ರು ತರಹುಣಿಸೆ, ರವಿ ಈಚಲಮರ
ಪ್ರಕಾಶಕರು: ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ.
ಒಳಪುಟ ವಿನ್ಯಾಸ : ಕೃಷ್ಣ ಬಾದರ್ಲಿ
ಮುಖಪುಟ ವಿನ್ಯಾಸ : ಸರೋವರ್ ಬೆಂಕೀಕೆರೆ
ಬೆಲೆ: ರೂ. 200/-(ರಿಯಾಯಿತಿ ಲಭ್ಯ)
ಆಯ್ದ ಭಾಗ...
"ನಮ್ಮ ಭೂಮಿಯನ್ನು ನಾವು ಬಿಡುವುದಿಲ್ಲ, ಬೇಕಾದರೆ ನಮ್ಮ ಪ್ರಾಣ ತೆಗೆದುಕೊಳ್ಳಿ" ಎಂದು ಅವರೆತ್ತಿದ ಗಟ್ಟಿದನಿ, ಹೋರಾಟಕ್ಕೆ ಶಕ್ತಿ ತುಂಬಿತು.ಜೈಲು ವಾಸ, ಅಧಿಕಾರಿಗಳ ಬೆದರಿಕೆ, ಸರ್ಕಾರದ ಉಪೇಕ್ಷೆ ಯಾವುದಕ್ಕೂ ಬಗ್ಗದೆ ಈ ಮಹಿಳೆಯರು ನಿರಂತರವಾಗಿ ಧರಣಿ ಸತ್ಯಾಗ್ರಹದಲ್ಲಿ ಪಾತ್ರವಹಿಸಿದ್ದು, ಸಮಾಜದ ಅಂತಃಕರಣವನ್ನು ತಾಕಿತು, ಸರ್ಕಾರದ ಕಲ್ಲೆದೆಯನ್ನೂ ಕರಗಿಸಬಲ್ಲ ಅಸ್ತ್ರವಾಯಿತು. ಹೋರಾಟಕ್ಕಿಳಿದಿದ್ದ ರೈತ ಮಹಿಳೆಯರ ಪಾಲಿಗೆ ಇದು ಕೇವಲ ಲಾಭ-ನಷ್ಟದ ಪ್ರಶ್ನೆಯಾಗಿರಲಿಲ್ಲ ಅಥವಾ ತಲೆತಲಾಂತರಗಳ ಕೌಟುಂಬಿಕ ಪ್ರತಿಷ್ಟೆಯನ್ನು ರಕ್ಷಣೆಯವಿಷಯವೂ ಆಗಿರಲಿಲ್ಲ,ಈ ಹೋರಾಟವು ರೈತಮಹಿಳೆಯರ ಅಸ್ತಿತ್ವ ಮತ್ತು ಘನತೆಯ ರಕ್ಷಣೆಗಾಗಿಯೂ ಕೂಡಾ ಆಗಿತ್ತು. ದಿನನಿತ್ಯದ ಬದುಕಿನ ಜಂಜಾಟಗಳನ್ನೂ ನಿರ್ವಹಿಸುತ್ತಲೇ ಸತತವಾಗಿ ಹೋರಾಟದ ಭಾಗವಾಗಿ ಸಕ್ರಿಯರಾಗಿದ್ದ ಈ ರೈತ ಮಹಿಳೆಯರನ್ನು ಮಾತನಾಡಿಸಿದಾಗ, “ಭೂಮಿಯನ್ನು ಕಳೆದುಕೊಂಡರೆ ಪುರುಷರು ನಗರಕ್ಕೆ ಹೋಗಿ ಕೆಲಸ ಮಾಡಬಹುದು, ಆದರೆ ತಲೆಮಾರುಗಳಿಂದ ಮಣ್ಣನ್ನೇ ನಂಬಿದ ಮಹಿಳೆಯರು ಎಲ್ಲಿಗೆ ಹೋಗಬೇಕು? ಅರ್ಧ ಕುಂಟೆ ಜಮೀನಿದ್ದರೆ ಹೂವು ತರಕಾರಿ ಬೆಳೆದು ಹೊಟ್ಟೆ ಹೊರೆಯಬಹುದು,ಒಂದು ಕುಂಟೆ ಭೂಮಿಯಿದ್ದರೆ ಒಂದೆರಡು ಹಸು ಕಟ್ಟಿ ಅದಕ್ಕೆ ಬೇಕಿರುವ ಮೇವು ಬೆಳೆದು ಬದುಕು ನಡೆಸಬಹುದು ಅಥವಾ ಒಂದ್ಹತ್ತು ಕುರಿ ಮೇಯಿಸಿ ಜೀವನ ನಿರ್ವಹಿಸಬಹುದು, ಇನ್ನಷ್ಟು ಭೂಮಿಯಿದ್ದರೆ ಕಷ್ಟಪಟ್ಟು ಬೇಸಾಯ ಮಾಡಿ ಅನುಕೂಲವಾಗಿಯೇ ಬದುಕಬಹುದು, ಬದುಕಿಗೆ ಇಂತಹ ಭದ್ರತೆ ನೀಡುವ ಭೂಮಿಯೇ ಇಲ್ಲವಾದರೆ ಏನು ಮಾಡುವುದು?” ಎಂಬ ಪ್ರಶ್ನೆಯೇ ಅವರನ್ನು ಹೋರಾಟಕ್ಕೆಳೆತಂದ ಆಲೋಚನೆಯಾಗಿತ್ತು.ಕೊನೆಗೂ ಜುಲೈ 2025ರಲ್ಲಿಕರ್ನಾಟಕ ಸರ್ಕಾರವು ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವುದಾಗಿ ಘೋಷಿಸಿದ್ದರೆ, ಅದರ ಹಿಂದೆ ಈ ರೈತ ಮಹಿಳೆಯರ ದಿಟ್ಟ ಹೋರಾಟದ ಪಾಲೂ ಇದೆ.
• ಮಲ್ಲಿಗೆ ಸಿರಿಮನೆ