03/01/2024
ಗೋಗ್ರಾಸ.. ..ಆಗದಿರಲಿ ಗೋವಿಗೆ ಅಂತಿಮ "ಗ್ರಾಸ" !
ಎರಡು ಘಟನೆಗಳು ಈ ಲೇಖನ ಬರೆಯಲು ಪ್ರೇರಣೆ. ಮೊದಲನೆಯದು ಪಟ್ಟಣದಲ್ಲಿ ಹಸು ಸಾಕಿದವರೊಬ್ಬರ ಕಥೆ. ಅವರ ಮನೆಯಲ್ಲಿ ಒಂದು ಗೋವು. ಅಕ್ಕ ಪಕ್ಕದ ಹತ್ತು ಹಲವು ಮನೆಗಳಲ್ಲಿ ಯಾವುದೇ ಗೋವುಗಳಿಲ್ಲ. ಹಬ್ಬದಲ್ಲಿ ಗೋಗ್ರಾಸ ನೀಡಬೇಕಲ್ಲ? ಇವರೂ ಸೇರಿದಂತೆ ೧೨ ಜನ ಇವರ ಮನೆಯಲ್ಲಿನ ಗೋವಿಗೆ ಯಥಾನುಶಕ್ತಿಯಾಗಿ ಭಕ್ತಿಯಿಂದ "ಗೋಗ್ರಾಸ" ನೀಡಿದರು. ಪರಿಣಾಮ?ಹಸು ಅಡ್ಡ ಬಿತ್ತು, ಹೊಟ್ಟೆಯಲ್ಲಿ ಆಮ್ಲತೆ ಉಕ್ಕಿತು, ಹಸುವಿನ ಕಣ್ಣು ಮೇಲೆ ಸಿಕ್ಕಿದವು, ನಿಶ್ಯಕ್ತವಾದ ಹಸು ಯಾವ ಚಿಕಿತ್ಸೆಗೂ ಬಗ್ಗದೇ ಪ್ರಾಣ ಬಿಟ್ಟಿತು.
ಎರಡನೆಯದು ಬಡ ಗೋಪಾಲಕನೊಬ್ಬನ ಕಥೆ. ಆತನ ಮನೆಯಲ್ಲೊಂದು ಹಸು. ಆ ಊರಿನಲ್ಲಿ ಎಲ್ಲಿಯೇ ಹೊಸ ಮನೆಯ ಗೃಹ ಪ್ರವೇಶವಾಗಲಿ ಅಲ್ಲಿ ಇವರದೇ ಹಸು ಮನೆ ಬೆಳಗುವುದು. ಆ ದಿನ ಹೊಸಮನೆಯಲ್ಲಿ ಮನೆಜನದ ಮೊದಲ ಪ್ರವೇಶ ಹಸುವಿನ ಪಾಲಿಗೆ ಕೊನೆಯ ದಿನವಾಯಿತು. ಹಸು ಮನೆ ಪ್ರವೇಶಿಸಿತಲ್ಲ. ಎಲ್ಲರೂ ಅದಕ್ಕೆ ಇಷ್ಟವಾಗಲೆಂದು "ಗೋಗ್ರಾಸ" ಎಂದು ಅನ್ನ, ಪಾಯಸ, ಮೈಸೂರು ಪಾಕ, ಜಿಲೇಬಿ ರಸ ನೀಡಿದ್ದೇ ನೀಡಿದ್ದು. ಇನ್ನೇನು? ಹಸುವಿನ ಹೊಟ್ಟೆ ತುಂಬೆಲ್ಲಾ ಅನ್ನವೋ ಅನ್ನ, ಜಿಲೇಬಿ ಪಾಕ, ಪಾಯಸ. ಹೇಗೆ ಉಳಿದೀತು ಹಸು?. ಎಸಿಡಿಟಿ ಜಾಸ್ತಿಯಾಗಿ ಯಾವುದೇ ಚಿಕಿತ್ಸೆಗೆ ಬಗ್ಗದೇ ಹಸು ಪ್ರಾಣ ಬಿಟ್ಟು ಆತನ ಜೀವನಾಧಾರವನ್ನೇ ಕಸಿದುಕೊಂಡು ಜನರ ಚರ್ಚೆಗೆ "ಗ್ರಾಸ"ವಾಯಿತು.
"ಗೋಗ್ರಾಸ" ಎಂಬುದು ಅನಾದಿಕಾಲದಿಂದಲೂ ಆಚರಣೆಯಲ್ಲಿರುವ ವಿಚಾರ. ಗೋವು ಅನೇಕ ಭಾರತೀಯರ ಜೀವನದಲ್ಲಿ ಹಾಸು ಹೊಕ್ಕು. ಅದರ ಹಾಲು,ಮಜ್ಜಿಗೆ, ತುಪ್ಪ, ಗೊಬ್ಬರ ಉಪಯೋಗಿಸದ ಜನರಿಲ್ಲ. ಕಾರಣ ಅದು ಗೋಮಾತೆ, ಕಾಮಧೇನು. ಅಂತಹ ಗೋವಿಗೆ ನಾವು ಕೊಡುವ "ಗೋಗ್ರಾಸ" ಅತ್ಯಂತ ಅಲ್ಪವೇ ಅಗಿದ್ದರೂ ಅದೇ ಕಲ್ಪವೆಂದು ಭಾವಿಸಿ ನೀಡಬೇಕು ಎಂಬುದು ಪ್ರತೀತಿ. ಗೋಗ್ರಾಸ ರೂಪದಲ್ಲಿ ನೀಡುವ ಆಹಾರ ಅದು ಅದಕ್ಕೆ ಸಂಕಟ ತರಬಾರದು. ಗೋಗ್ರಾಸ ನೀಡುವಾಗ ಸಂಸ್ಕೃತದಲ್ಲಿ ಹೇಳುವ ಶ್ಲೋಕ ಒಂದಿದೆ.
ಸುರಭಿಃ ವೈಷ್ಣವಿ ಮಾತ ಸುರುಲೋಕೆ ಮಹೀಯತೆ।
ಗ್ರಾಸಮುಷ್ಟಿಂ ಮಯಾದತ್ತಂ ಸುರಭಿಃ ಪ್ರತಿಗೃಹ್ಯತಾಮ್॥
ಇದರರ್ಥ.. "ಸುರಭಿಯೇ, ನೀನು ವೈಷ್ಣವಿ ತಾಯಿ, ದೇವಲೋಕದಲ್ಲಿಯೂ ಮತ್ತು ಭೂಮಿಯಲ್ಲೂ ಇದ್ದೀಯ.. ನನ್ನಿಂದ ನಿನಗೆ ಕೊಡಲ್ಪಡುವ ಹಿಡಿ ತುತ್ತು ಆಹಾರವನ್ನು ಸ್ವೀಕರಿಸು. ಇಲ್ಲಿ “ಗ್ರಾಸ” ಅಂದರೆ ತುತ್ತು. "ಮುಷ್ಟಿಂ ಎಂದರೆ ಹಿಡಿ. ಅಂದರೆ ನಾವು ಕೊಡುವ ಆಹಾರ ತುತ್ತಿನ ಪ್ರಮಾಣದ್ದಾಗಿರಬೇಕೇ ಹೊರತು ಯಥೇಚ್ಛತೆಯಿಂದ ಕೂಡಿರಬಾರದು. ಗೋಗ್ರಾಸದಲ್ಲಿ ಇರುವ ಅನ್ನ, ಬೆಲ್ಲ, ಅಕ್ಕಿ ಇತ್ಯಾದಿಗಳು ಒಂದೊಂದು ಮುಷ್ಟಿಯಷ್ಟೇ ಇರಬೇಕು ಎಂದು ಶಾಸ್ತ್ರ ಹೇಳುತ್ತದೆ.
ಬೌದ್ಧರ ಪ್ರಕಾರ "ಗೋಗ್ರಾಸ" ಎಂದರೆ ಆಕಳ ಮುಖ. ಗೋಗ್ರಾಸ ಎಂದರೆ ಎಲೆಗಳು, ಕಾಂಡಗಳು ಮತ್ತು ಧಾನ್ಯಗಳು ಸೇರಿದಂತೆ ಸಸ್ಯ ಸಹಿತವಿರುವ ಮೇವು ಎಂದೂ ಅರ್ಥವಿದೆ.
ಗೋವಿಗೆ ಯಥೇಚ್ಛವಾಗಿ ಆಹಾರ ಕೊಡಬೇಕಾಗಿದ್ದು ಅದರ ನೈಸರ್ಗಿಕ ಆಹಾರವಾದ ಹುಲ್ಲು, ಹಿಂಡಿ, ಬೂಸಾ ಇತ್ಯಾದಿಗಳನ್ನು. "ಗೋಗ್ರಾಸ" ಏನಿದ್ದರೂ ಒಂದು ಹಿಡಿ ಮುಷ್ಟಿಯಷ್ಟಿರಬೇಕು ಎಂದು ಶಿವಮೊಗ್ಗದ ನಾಗಸುಬ್ರಮಣ್ಯ ದೇವಾಲಯದ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ Sandesh Upadya ಅಭಿಪ್ರಾಯ ಪಡುತ್ತಾರೆ.
ಇದಲ್ಲದೇ ಗೋಗ್ರಾಸದ ಬಗ್ಗೆ ಕಡಿರುದ್ಯಾವರದ ಶ್ರಿ ಪ್ರಭಾಕರ ಕಾರಂತ್ ಸಹಾ "ಬಾಳೆ ಎಲೆ ಯಲ್ಲಿ ಗೋವು ತಿನ್ನಬಹುದಾದ ಅನ್ನ ಪಾಯಸ ಭಕ್ಷ್ಯಗಳನ್ನು (ಹಾಲು ಮೊಸರು ತುಪ್ಪ ಮೊದಲಾದ ಗವ್ಯ ಹೊರತು ಪಡಿಸಿ) ಬಡಿಸಿ ಎಲೆಯನ್ನು ಪೂರ್ವಾಗ್ರವಾಗಿ ಇಡಬೇಕು. ಆ ಅನ್ನಕ್ಕೆ ತೀರ್ಥ ನಿರ್ಮಾಲ್ಯ ಹಾಕಿ ಸೊಬಗಿನ ಅರ್ಥವುಳ್ಳ ವಿವಿಧ ಶ್ಲೋಕಗಳನ್ನು ಹೇಳಬೇಕು. ಎಲ್ಲ ಶ್ಲೋಕಗಳಲ್ಲಿಯೂ ಸಹ " ಗ್ರಾಸಮುಷ್ಟಿ ಪ್ರದಾನೇನ ಸ ಮೇ ವಿಷ್ಣುಃ ಪ್ರಸೀದತು" ಎಂಬ ಆಶಯವಿರುತ್ತದೆ. ಗೋಗ್ರಾಸ ನೀಡಬೇಕಾದರೆ ಒಂದು ಮುಷ್ಟಿಯಷ್ಟನ್ನೇ ನೀಡಬೇಕು ಎನ್ನುವುದು ಮೊದಲಿನಿಂದಲೂ ನಡೆದು ಬಂದ ವಾಡಿಕೆ.
ಇದನ್ನು ತಪ್ಪಾಗಿ ಅರ್ಥೈಸಿದವರು ಹುಲ್ಲು ಮತ್ತು ಹಿಂಡಿಗೂ "ಗ್ರಾಸ ಮುಷ್ಟಿಂ" ಮಾಡಿ ಗೋವು ಬಡಕಲಾಗಿ ನೆಲಹಿಡಿದು ಸಾಯುವಂತೆ ಮಾಡುವುದನ್ನೂ ಸಹ ನೋಡಲಾಗಿದೆ.
ಹಾಗೆಂದು ಅಕ್ಕಿ, ಬೇಳೆ ಇತ್ಯಾದಿ ದವಸ ಧಾನ್ಯಗಳನ್ನು ಬೇಕಾದಷ್ಟು ಗೋಮಾತೆಗೆ ನೀಡಿದರೆ ಅದರ ಅಜೀರ್ಣ ಅಥವಾ ಒಮ್ಮೊಮ್ಮೆ ಮರಣವಾಗಿ ಗೋಹತ್ಯಾ ದೋಷ ಬರಲೂಬಹುದು. ಕಾರಣ ಗೋಗ್ರಾಸ ನೀಡಬೇಕಾದರೆ ಹುಶಾರಾಗಿರಬೇಕಾಗಿರುವುದು ವಿಹಿತ.
ಇತ್ತೀಚೆಗೆ ಕೆಲವೊಂದು ಹಸುಗಳು "ಗೋಗ್ರಾಸ" ಜಾಸ್ತಿಯಾಗಿ ಮರಣವನ್ನಪ್ಪಿದ ಘಟನೆಗಳು ಇವೆ. ವಿವಿಧ ಹಬ್ಬಗಳ ಸಮಯದಲ್ಲಿ ಹಸುಗಳಿಗೆ ಗೋಗ್ರಾಸ ನೀಡುವುದು ವಾಡಿಕೆ. ಹಸುಗಳ ಸಂಖ್ಯೆ ಕಡಿಮೆಯಾದ ಈ ಸಮಯದಲ್ಲಿ ಒಂದೇ ಹಸುವಿಗೆ ಅಕ್ಕಿ, ಬೆಲ್ಲ ಇತ್ಯಾದಿ ಶರ್ಕರ ಪಿಷ್ಟ ಹೊಂದಿದ ವಸ್ತುಗಳು ಏಕಕಾಲದಲ್ಲಿ ಉದರಕ್ಕೆ ಸೇರುವ ಸಾಧ್ಯತೆ ಇದೆ. ಹಸುವಿನ ಉದರ ಮನುಷ್ಯರ ಆಹಾರ ಜೀರ್ಣ ಮಾಡಿಕೊಳ್ಳಲು ತಕ್ಕುದಲ್ಲ. ಅದರ ಆಕಾರ ಮತ್ತುವಿನ್ಯಾಸ ಇರುವುದು ಮನುಷ್ಯನಿಗೆ ಬಳಸಲು ಯೋಗ್ಯವಲ್ಲದ ಹುಲ್ಲು ತಿಂದು ಅತ್ಯಂತ ಶ್ರೇಷ್ಟವಾದ ಹಾಲು ನೀಡಲು ಇರುವುದು.
ದನಗಳಿಗೆ ಅಧಿಕ ಆಹಾರ ಬೇಕು. ಜೊತೆಗೆ ಅವು ಒಮ್ಮೆ ತಿಂದ ಆಹಾರವನ್ನು ಬಿಡುವಾದಾಗ ಪುನಃ ಬಾಯಿಗೆ ತಂದುಕೊಂಡು ಮೆಲುಕು ಹಾಕುವ ಮೂಲಕ ಚೆನ್ನಾಗಿ ನುರಿಸಿ ಆಮೇಲೆ ನುಂಗುತ್ತವೆ. ಮನುಷ್ಯರಿಗೆ ಈ ಸೌಲಭ್ಯವಿಲ್ಲ. ಒಮ್ಮೆ ತಿಂದರೆ ಮುಗಿಯಿತು, ಆಹಾರದ ಮುಮ್ಮುಖ ಪ್ರಯಾಣ ಆರಂಭವಾದಂತೆಯೇ. ಆದರೆ ಜಾನುವಾರುಗಳು ಒರಟಾದ ಮತ್ತು ಕಡಿಮೆ ಗುಣಮಟ್ಟದ ಮೇವನ್ನು ತಿಂದು ಜೀರ್ಣಿಸಿಕೊಳ್ಳಲು ವಿಶಿಷ್ಟವಾದ ಜೀರ್ಣಾಂಗವ್ಯೂಹವನ್ನು ಹೊಂದಿವೆ. ಇದರ ರಚನೆ ಮತ್ತು ಕಾರ್ಯವಿಧಾನಗಳು ನಿಜಕ್ಕೂ ಅದ್ಭುತ ಮತ್ತು ಕುತೂಹಲಕರ.
ನಮ್ಮಲ್ಲಿ ಹಿಂದಿನ ಕಾಲದಲ್ಲಿ ದೇಶಿ ತಳಿಗಳನ್ನು ಸಾಕಲಾಗುತ್ತಿತ್ತು. ಸಣ್ಣ ಕರುವಿದ್ದಾಗಲೆ ಅವುಗಳಿಗೆ ಗೋ ಗ್ರಾಸ ನೀಡಿ ಪ್ರೀತಿಯಿಂದ ನೋಡಿಕೊಂಡಾಗ ಮಾತ್ರ ಕರು ಹಾಕಿದಾಗ ಹತ್ತಿರ ಬರಲು, ಹಾಲು ಕರೆಯಲು ಅವಕಾಶ. ಅಪರಿಚಿತರಿಗೆ ಒದೆತವೇ ಗತಿ! ಇವೆಲ್ಲವನ್ನು ತಿಳಿದುಕೊಡು ದಿನಾಲು ಬೆಳಗ್ಗೆ ತಲಾ ಒಂದು ಮುಷ್ಠಿಯಷ್ಟು ಬೆಲ್ಲ ಮತ್ತು ಅಕ್ಕಿಯನ್ನು ಸೇರಿಸಿ ತಾಯಿ ಮಕ್ಕಳಿಗೆ ಕೈ ತುತ್ತು ತಿನ್ನಿಸುವಂತೆ ಸ್ವತಃ ಕೈಯಿಂದಲೇ ನೀಡಿ ಜಾನುವಾರಿನ ಮುಖ ಸವರಿ ನಮಸ್ಕಾರ ಮಾಡುವ ಮುಖಾಂತರ ತಮ್ಮಮನೆಯ ಸದಸ್ಯನಂತೆ ನೋಡಿಕೊಳ್ಳುತ್ತಿದ್ದರು ಎನ್ನುತ್ತಾರೆ ಪಶುಪಾಲನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ: Govind Bhat
ಜಾನುವಾರುಗಳು ಮೇವು, ಹಿಂಡಿ ತಿಂದು ನೀರು ಕುಡಿದು ಬದುಕುತ್ತವೆ. ಮೇಯುವಾಗ ಹಸಿ ಅಥವಾ ಒಣ ಹುಲ್ಲನ್ನು ಆದಷ್ಟು ಗಬಗಬನೆ ಲಗುಬಗೆಯಿಂದ ತಿನ್ನುತ್ತವೆ. ಇದು ಅವು ಹಿಂಸ್ರ ಮೃಗಗಳಿಗೆ ಅಂಜಿ ಮಾಡುವ ಪ್ರಕ್ರಿಯೆ ಇರಬಹುದು. ನಂತರ, ತಿಂದ ಮೇವನ್ನು ವಿರಾಮದ ವೇಳೆಯಲ್ಲಿ ಬಾಯಿಗೆ ಪುನಃ ತಂದು ಜೊಲ್ಲು ಸೇರಿಸಿ ಮೆಲುಕು ಹಾಕುತ್ತವೆ.
ಅವಸರದಲ್ಲಿ ರಾಸು ನುಂಗಿದ ಆಹಾರವು ವಿರಾಮದಲ್ಲಿ ಮೆಲುಕಾಡುವಾಗ ಅಕ್ಕಿ ನೀರು ಒಟ್ಟಿಗೇ ಹಾಕಿ ರುಬ್ಬಿದಂತೆ ಬಾಯಿಯಲ್ಲಿ ಸೃವಿಸುವ ಜೊಲ್ಲುರಸದೊಂದಿಗೆ ಮಿಶ್ರಗೊಳ್ಳುವುದರ ಮೂಲಕ ಜೀರ್ಣಕ್ರಿಯೆ ಆರಂಭಗೊಳ್ಳುತ್ತದೆ. ಹಸುವೊಂದು ದಿನದಲ್ಲಿ 8 ಗಂಟೆಗಳಷ್ಟು ಕಾಲ ಮೆಲುಕುಹಾಕುವುದರಲ್ಲೇ ಕಳೆಯುತ್ತದೆ !. ಆಹಾರ ಸರಿಯಾಗಿ ಜೀರ್ಣವಾಗಬೇಕಾದರೆ ಇದು ಅಗತ್ಯ ಕೂಡಾ. ಈ ಕೆಲಸಕ್ಕಾಗಿ ಬೆಳೆದ ಹಸುವಿನಲ್ಲಿ ದಿನಕ್ಕೆ 150-180 ಲೀಟರಿನಷ್ಟು (4-5 ಬಕೇಟ್) ಜೊಲ್ಲು ಉತ್ಪಾದನೆಯಾಗುತ್ತದೆ. ಹೀಗೆ ಚೆನ್ನಾಗಿ ಅಗಿಯಲ್ಪಟ್ಟ ಜೊಲ್ಲು ಮಿಶ್ರಿತ ಆಹಾರವು ಜಠರದ ನಾಲ್ಕು ಕೋಣೆಗಳಲ್ಲಿ ಮೊದಲನೇ ಹೊಟ್ಟೆಯಾದ ‘ರೂಮೆನ್’ಅಥವಾ " ಮೆಲುಕು ಚೀಲ"ಕ್ಕೆ ಹೋಗುತ್ತದೆ.
ಇದೊಂದು ದೊಡ್ಡ ಉಗ್ರಾಣವಿದ್ದಂತೆ. ತಿಂದಷ್ಟೂ ಹಿಗ್ಗುವ ಚರ್ಮದ ಚೀಲ. ತಿಂದ ಆಹಾರವು 10-12 ತಾಸುಗಳ ಕಾಲ ಇಲ್ಲಿದ್ದು ಸೂಕ್ಷ್ಮಾಣುಗಳಿಂದ ಭಾಗಶಃ ಜೀರ್ಣಗೊಂಡು ಮುಂದೆ ಸಾಗುತ್ತದೆ. ಇಲ್ಲಿ ತಂಗಿರುವಾಗ ಈ ಸೂಕ್ಷ್ಮಾಣುಗಳು ಅದನ್ನು ತಿಂದು ಜೀರ್ಣಿಸುತ್ತವೆ. ಈ ಸೂಕ್ಷ್ಮಾಣುಗಳು ನಿರುಪದ್ರವಿಗಳು. ಜೀರ್ಣಕ್ರಿಯೆಗೆ ಸಹಕಾರಿಗಳು. ಅವುಗಳ ಸಹಾಯದಿಂದಲೇ ಜಾನುವಾರುಗಳು ನಾರು ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯ.
ಹಸು ತನ್ನ ಹೊಟ್ಟೆಯಲ್ಲಿ ಈ ಸೂಕ್ಷ್ಮಾಣುಗಳಿಗೆ ಜಾಗ ನೀಡಿ ಅವುಗಳ ವೃದ್ಧಿಗೆ ಬೇಕಾದ ಆಹಾರವನ್ನು ಕೊಡುತ್ತದೆ. ಬದಲಾಗಿ ಸೂಕ್ಷ್ಮಾಣುಗಳು ಹಸುಗಳ ಆಹಾರವನ್ನು ಶೇ.70 ರಷ್ಟು ಜೀರ್ಣಗೊಳಿಸುತ್ತವೆ. ಅಷ್ಟೇ ಅಲ್ಲದೇ ಇವುಗಳಿಂದ ದೇಹಕ್ಕೆ ಬೇಕಾದ ಪ್ರೋಟೀನ್, ವಿಟಮಿನ್ ಬಿ ಕಾಂಪ್ಲೆಕ್ಸ್ ಹಾಗೂ ಇನ್ನಿತರ ಪೋಷಕಾಂಶಗಳು ತಯಾರಾಗುತ್ತವೆ. ಹೀಗಾಗಿ ಹಸು ಮತ್ತು ಈ ಸೂಕ್ಷ್ಮಾಣುಜೀವಿಗಳು ಪರಸ್ಪರರ ಉಳಿವಿಗಾಗಿ ಪೂರಕ ಸಂಬಂಧ ಹೊಂದಿವೆ. ಇದಕ್ಕೆ ಒಂದು ರೀತಿಯ ಸಹಬಾಳ್ವೆಯ "ಕೂಡು ಜೀವನ" (ಸಿಂಬಯಾಸಿಸ್) ಅನ್ನಬಹುದು.
ಹಸುವಿನ ಹೊಟ್ಟೆಯಲ್ಲಿ ಮನುಷ್ಯನ ಆಹಾರವಾದ ಅನ್ನ, ಪಾಯಸ, ಜಿಲೇಬಿ ಪಾಕ ಇತ್ಯಾದಿ ಜಾಸ್ತಿ ನೀಡಿದಲ್ಲಿ ಆಮ್ಲೀಯತೆ ಹಠಾತ್ತನೆ ಜಾಸ್ತಿಯಾದರೆ ಈ ಸೂಕ್ಷ್ಮಾಣುಜೀವಿಗಳು ಅವು ಸತ್ತು ಹೋಗುತ್ತವೆ.
ಹಸುವಿಗೆ ಅನೇಕರು ಏಕಕಾಲದಲ್ಲಿ "ಗೋಗ್ರಾಸ" ನೀಡಿದಾಗ ಅಥವಾ ಗೃಹ ಪ್ರವೇಶ ಸಂದರ್ಭದಲ್ಲಿ ಗೋಗ್ರಾಸ ನೀಡುವಾಗ ಒಂದಿಷ್ಟು ಮುಷ್ಟಿ ಗಾತ್ರದಲ್ಲಿ ಶಾಸ್ತ್ರಕ್ಕೆ ತಕ್ಕ ಹಾಗೆ ನೀಡಬೇಕು.
ಗೃಹ ಪ್ರವೇಶದ ಸಂದರ್ಭದಲ್ಲಿ ಹಣ ನೀಡುವುದರ ಜೊತೆ ಹಸುವಿಗಾಗಿ ಒಂದು ಚೀಲ ಹಿಂಡಿ ಮತ್ತು ಒಳ್ಳೆಯ ಹುಲ್ಲು ಕೊಡಿಸಿದಲ್ಲಿ ಗೋಪಾಲಕರು ಗೋವಿಗೆ ಅದನ್ನು ಹಾಕಿಯೇ ಹಾಕುತ್ತಾರೆ. ಹಸುಗಳು ನಗರಗಳಲ್ಲಿ ಮನೆ ಬಾಗಿಲಿಗೆ ಬಂದಾಗ ಅವುಗಳಿಗೆ ಮನೆಯಲ್ಲಿ ಉಳಿದ ಅನ್ನ, ಪಾಯಸ, ಕೊಳೆತ ಹಣ್ಣುಗಳು ಇವುಗಳನ್ನು ಹಾಕುವುದು ಸಹ ಬಹಳ ಸಾಮಾನ್ಯ. ಇದಕ್ಕೆ ಒಗ್ಗಿಕೊಂಡ ಹಸುಗಳು ಜೀರ್ಣಿಸಿಕೊಳ್ಳುತ್ತವೆ. ಇಲ್ಲದಿದ್ದರೆ ಅವುಗಳ ಜೀವಕ್ಕೆ ತೊಂದರೆ.
ಕಾರಣ "ಗೋಗ್ರಾಸ" ಮಾತ್ರ ಹಿಡಿಮುಷ್ಟಿಯಷ್ಟೇ ಇರಲಿ. ಗೋವಿಗೆ ಮಾತ್ರ ಅದರದೇ ನೈಸರ್ಗಿಕ ಆಹಾರವಾದ ಸಾಕಷ್ಟು ಹಸಿರು ಮತ್ತು ಒಣ ಹುಲ್ಲು, ಸಮತೋಲ ಪಶು ಆಹಾರ, ಹಿಂಡಿ, ಬೂಸಾ ಹಾಕಿ ಸಾಕಿ ಅದರ ಕೃಪೆಗೆ ಪಾತ್ರರಾದರೆ ಅದೇ "ಗೋಗ್ರಾಸ"ದ ಆಚರಣೆಯ ಸಾರ್ಥಕಥೆಯಾದೀತು.
ಪ್ರೊ (ಡಾ:) ಎನ್.ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ