15/02/2025
*16 ಗಂಟೆಗಳ ಹಿಂದೆ ಪರೀಕ್ಷೆಯನ್ನು ಮುಂದೂಡುವ ನಿರಂಕುಶವಾದಿ ಕೃಷಿ ಸಚಿವ ಚೆಲುವರಾಯಸ್ವಾಮಿಗೆ ಧಿಕ್ಕಾರ*
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕೃಷಿ ಮಂತ್ರಿಗಳಾದ ಚೆಲುವರಾಯಸ್ವಾಮಿ ರವರೇ,
ನೀವು ಸಾಮಾಜಿಕ ನ್ಯಾಯ ಮತ್ತು ಉದ್ಯೋಗವಕಾಶ ಆಧಾರದ ಮೇಲೆ ಸರ್ಕಾರ ರಚಿಸಿದ್ದೀರಿ. ನಿಮ್ಮ ಪ್ರಣಾಳಿಕೆಯಲ್ಲಿಯೂ ಉದ್ಯೋಗಾವಕಾಶ ಸೃಷ್ಟಿಸುವುದಾಗಿ ಘೋಷಿಸಿದ್ದೀರಿ. ಆದರೆ, ನಿರುದ್ಯೋಗ ಪ್ರಮಾಣ ದೇಶದಲ್ಲಿ 7.8% ಹಾಗೂ ರಾಜ್ಯದಲ್ಲಿ 10.65% ತಲುಪಿರುವುದು ಗಂಭೀರ ವಿಷಯ.
ರಾಷ್ಟ್ರೀಯ ಆರ್ಥಿಕತೆಯ ಬೆನ್ನೆಲುಬಾದ ಕೃಷಿ ರಂಗ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಕಾರ್ಯವೈಖರಿ ನಿಮಗೆ ತಿಳಿದಿರಬೇಕು. ಇಂದು ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ. 70% ಹುದ್ದೆಗಳು ಖಾಲಿ ಇವೆ. ಇದರಿಂದ ಸಾವಿರಾರು ಕೃಷಿ ಪಿ.ಎಚ್.ಡಿ ವಿದ್ಯಾರ್ಥಿಗಳು ಉದ್ಯೋಗವಿಲ್ಲದೆ ಬೀದಿಗಳಲ್ಲಿ ಅಲೆದಾಡುತ್ತಿದ್ದಾರೆ. ಆದರೆ, ಸರ್ಕಾರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
*ಇತ್ತೀಚೆಗೆ, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು 50 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಪರೀಕ್ಷೆಯ ದಿನಾಂಕ 16/02/2025 ರಂದು ನಿಗದಿಯಾಗಿತ್ತು. ಆದರೆ ಈ ದಿನ ಯಾವುದೇ ಸ್ಪಷ್ಟ ಕಾರಣವಿಲ್ಲದೆ, ಪರೀಕ್ಷೆಯನ್ನು ಮುಂದೂಡಲಾಗಿದೆ ಎಂಬ ಅಧಿಸೂಚನೆಯನ್ನು ಮಧ್ಯಾಹ್ನ 12ಗಂಟೆಗೆ ಪ್ರಕಟಿಸಿದ್ದೀರಿ.*
ಈ ಪರೀಕ್ಷೆಗೆ 950 ಪಿ.ಎಚ್.ಡಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಜಪಾನ್, ಜರ್ಮನಿ, ಚೀನಾ, ಕೊರಿಯಾ,ಯುರೋಪ್ ಸೇರಿದಂತೆ ದೇಶದ ಹಲವೆಡೆಯಿಂದ ಬಂದವರು ಇದ್ದಾರೆ. ಹಲವಾರು ಅಭ್ಯರ್ಥಿಗಳು ತಮ್ಮ ಪೋಷಕರೊಂದಿಗೆ ಟ್ರೈನ್ ಮತ್ತು ವಿಮಾನದ ಮೂಲಕ ಬೆಂಗಳೂರಿಗೆ ತಲುಪಿದ್ದಾರೆ. ಆದರೆ ಕೇವಲ 16 ಗಂಟೆಗಳ ಹಿಂದೆ ಪರೀಕ್ಷೆಯನ್ನು ಮುಂದೂಡುವ ಮೂಲಕ ಈ ಪ್ರತಿಭಾವಂತ ಅಭ್ಯರ್ಥಿಗಳಿಗೆ ತಾವು ತೀವ್ರ ಅನ್ಯಾಯ ಮಾಡಿರುತ್ತೀರಿ.
2023 ರಲ್ಲಿ, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದಲ್ಲಿ ಮೀಸಲಾತಿ ನಿಯಮ ಉಲ್ಲಂಘಿಸಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾಡಲಾಯಿತು ಆದರೆ ಅದನ್ನು ನೀವು ಸಮರ್ಥಿಸಿ ಕೊಂಡಿರಿ. ಈ ಬಾರಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಸರ್ಕಾರದ ನೇಮಕಾತಿ ಮತ್ತು ಮೀಸಲಾತಿಯ ಆದೇಶಗಳ ಅನುಸಾರ ನ್ಯಾಯಸಮ್ಮತವಾಗಿ ನೇಮಕಾತಿಗಳನ್ನು ನಡೆಸಲು ತೀರ್ಮಾನಿಸಿದ್ದು ಅದಕ್ಕೆ ಕೃಷಿ ಮಂತ್ರಿಗಳಾದ ತಾವು ಸ್ವಾಪ್ರತಿಷ್ಠೆಗೆ *ವಿಶ್ರಾಂತ ಕುಲಪತಿಗಳಾದ ರಾಜೇಂದ್ರ ಪ್ರಸಾದ್ ಮತ್ತು ನೂತನ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಯಾದ ಅರುಣಿಕುಮಾರ್ ರವರ ಕುತಂತ್ರಗಳಿಗೆ ಕಿವಿಗೊಟ್ಟು ತಡೆಆಜ್ಞೆ ನೀಡಿರುವುದು ಸಂವಿಧಾನ ಬಾಹಿರ ಮತ್ತು ನಿರಂಕುಶವಾದ.* ಈ ನಿರ್ಧಾರಗಳು ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಮತ್ತು ಉದ್ಯೋಗವಕಾಶಗಳಲ್ಲಿ ತೀವ್ರ ಅನ್ಯಾಯ ಉಂಟುಮಾಡಿವೆ.
ಈಗಾಗಲೇ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ. 70% ಹುದ್ದೆಗಳು ಖಾಲಿ ಇರುವಾಗ, ಹೊಸ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕೆಂಬ ತಮ್ಮ ತೀರ್ಮಾನ ತರ್ಕಸಮ್ಮತವಲ್ಲ. ಈ ನಡುವೆ, ಹಲವು ವರ್ಷಗಳಿಂದ ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮೋದನೆ ನೀಡಬಾರದು ಎಂಬ ಹೋರಾಟ ನಡೆಯುತ್ತಿದ್ದರೂ ಸಹ ತಮ್ಮ ವೈಯಕ್ತಿಕ ಇಚ್ಛೆಗೆ ಅನುಸಾರ ಹೊಸದಾಗಿ ಎರಡು ಖಾಸಗಿ ಕೃಷಿ ಕಾಲೇಜುಗಳಿಗೆ ಅನುಮೋದನೆ ನೀಡಿದ್ದೀರಿ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ, ತಮ್ಮ ನಿಷ್ಠೆ ಸರ್ಕಾರಕ್ಕೂ? ಇಲ್ಲ ಖಾಸಗಿಯವರಿಗೋ? ತಾವುಗಳು ಈ ರಾಜ್ಯದ ಕೃಷಿ ಮಂತ್ರಿಯೋ? ಅಥವಾ ಮಂಡ್ಯ ಜಿಲ್ಲೆಯ ಕೃಷಿ ಮಂತ್ರಿಯೋ?
ನಿಮ್ಮ ರಾಜಕೀಯ ಲಾಭ ಮತ್ತು ಸ್ವಪ್ರತಿಷ್ಠೆಗಾಗಿ ಕೃಷಿ ಶಿಕ್ಷಣ ಸಂಸ್ಥೆಗಳನ್ನು ಹಾಳುಮಾಡುವ ಪ್ರಯತ್ನ ಕೂಡಲೇ ನಿಲ್ಲಿಸಿ. ಈಗಾಗಲೇ ನಾಳೆ ನಡೆಯಬೇಕಿದ್ದ ಪರೀಕ್ಷೆಗೆ ದೇಶ-ವಿದೇಶಗಳಿಂದ ಆಗಮಿಸಿರುವ ಅಭ್ಯರ್ಥಿಗಳಿಗೆ ಒಂದೇ ವಾರದೊಳಗೆ ಪರೀಕ್ಷೆಯ ದಿನಾಂಕ ನಿಗದಿಪಡಿಸಿ ಪರೀಕ್ಷೆಯನ್ನು ನಡೆಸಿ.
*ಇಲ್ಲವಾದಲ್ಲಿ, ರಾಜ್ಯದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ರೈತ ಸಂಘಟನೆಗಳ ಒಕ್ಕೂಟದಿಂದ ಸರ್ಕಾರದ ವಿರುದ್ಧ ಹಾಗೂ ಸೂತ್ರದಾರರಾದ ಕೃಷಿ ಮಂತ್ರಿಗಳಾದ ಚೆಲುವರಾಯಸ್ವಾಮಿ ವಿರುದ್ಧ ಹೋರಾಟ ನಡೆಸಲಾಗುವುದು ಮತ್ತು ನಿಮ್ಮ ರಾಜೀನಾಮೆಗೆ ಆಗ್ರಹಿಸಲಾಗುವುದು. ಅಲ್ಲ ಸ್ವಾಮಿ 950 ಅಭ್ಯರ್ಥಿಗಳ ಕುಟುಂಬಗಳ ಭವಿಷ್ಯದ ಬಗ್ಗೆ ನಿಮಗೆ ಕನಿಷ್ಠ ಮನುಷ್ಯತ್ವ ಮತ್ತು ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆ ಇದ್ದರೆ, ಈ ಪರೀಕ್ಷೆಯನ್ನು ಒಂದು ವಾರದೊಳಗೆ ನಡೆಸಿ.*
*ರಾಜ್ಯ ದಲಿತ,ಹಿಂದುಳಿದ ,ಅಲ್ಪಸಂಖ್ಯಾತ ಮತ್ತು ರೈತ ಸಂಘಟನೆಗಳ ಒಕ್ಕೂಟ- ಬೆಂಗಳೂರು*
#ಜೈಕಿಸನ್